ಬೆಂಗಳೂರು,ಡಿ.12- ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯಂತೆ ಸಾರಿಗೆ ನೌಕರರು ಹಾಗೂ ಸರ್ಕಾರದ ಪ್ರತಿಷ್ಠೆಯಿಂದಾಗಿ ಸಾರ್ವಜನಿಕರು ಇಂದು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಬಸ್‍ಗಳು ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾಸಗಿ ಬಸ್‍ಗಳ ಮೊರೆ ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಇದರ ನಡುವೆ ಪ್ರತಿಭಟನೆ ಕೈ ಬಿಡದಿದ್ದರೆ ನೌಕರರ ಮೇಲೆ ಎಸ್ಮಾ ಜಾರಿ ಮಾಡುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಯಾವುದೇ ಶಿಸ್ತು ಕ್ರಮ ಜರುಗಿಸಿದರೂ ನಾವು ಮಾತ್ರ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಸಂಧಾನ ವಿಫಲವಾಗಿದ್ದು, ಪ್ರತಿಭಟನೆ ಮುಂದುವರೆದಿರುವುದರಿಂದ ಬಸ್‍ಗಳಿಲ್ಲದೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತಿದ್ದ ಸಂದರ್ಭದಲ್ಲಿ ಪ್ರಶ್ನೆ ಮಾಡಿದ ಹಿನ್ನೆಲೆ ಮಾತಿನ ಚಕಮಕಿ ನಡೆದು ಕೆಲವು ಬಿಎಂಟಿಸಿ ನೌಕರರು ಹಾಗೂ ಪ್ರಯಾಣಿಕರು ಕೈಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ. ನೆಲಮಂಗಲಕ್ಕೆ ಯಶವಂತಪುರದಿಂದ ಬರುತ್ತಿದ್ದ ಬಿಎಂಟಿಸಿ ಬಸ್ಗೆ ಯಶವಂತಪುರ ಸಮೀಪ ಕಿಡಿಗೇಡಿಗಳು ಕಲ್ಲುತೂರಿ ಗಾಜು ಸಂಪೂರ್ಣ ಪುಡಿಪುಡಿಯಾಗಿವೆ.
ಯಶವಂತಪುರ, ಅರಿಶಿನಕುಂಟೆ ಹಾಗೂ ಅಡಕಮಾರನಹಳ್ಳಿ ಡಿಪೆÇೀ ಸೇರಿದಂತೆ ವಿವಿಧ ಭಾಗದಿಂದ ಸರಕಾರಿ ಬಸ್‍ಗಳು ಬಂದರೂ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿ ಪ್ರತಿಭಟನೆ ಮಾಡಿದ ಪರಿಣಾಮ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಬೆಳಗ್ಗೆ 9 ಗಂಟೆಯಿಂದ ಸಂಪೂರ್ಣ ಸ್ಥಗಿತವಾಗಿತ್ತು. ಸರಕಾರಿ ಬಸ್‍ಗಳನ್ನು ಆಶ್ರಯವಾಗಿಸಿಕೊಂಡಿದ್ದ ಬೆಂಗಳೂರಿಗರಿಗೆ ಹಾಗೂ ತಾಲೂಕಿನ ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ಬಸ್ ಇಲ್ಲದೆ ಪರದಾಡಿದ್ದಾರೆ. ಖಾಸಗಿ ಬಸ್‍ಗಳು ಸಹ ಕಡಿಮೆ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಆಟೋ ಹಾಗೂ ಇತರ ವಾಹನಗಳಿಗೆ ಅಲೆದಾಡುವ ಸ್ಥಿತಿ ಎದುರಾಗಿತ್ತು.