ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೇ.20ಕ್ಕೆ ಎರಡು ವರ್ಷವಾಗಲಿದೆ. ಅಷ್ಟರೊಳಗೆ ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯದಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಗಡುವು ನೀಡಿದರು.
ಗುರುವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 32,787 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಶೇ.82 ರಷ್ಟು ಸರಾಸರಿಯಲ್ಲಿ 26,961 ಪ್ರಕರಣಗಳಿಗೆ ಇದೀಗ ಮುಕ್ತಿ ನೀಡಲಾಗಿದೆ. ಇದೇ ಸಮಯದಲ್ಲಿ ಒಂದು ವರ್ಷಕ್ಕೆ ಮೇಲ್ಪಟ್ಟ 59,339 ಪ್ರಕರಣಗಳ ಪೈಕಿ 40,394 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ” ಎಂದು ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರು.
“ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೀರಿ. ಎಸಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ವಿಲೇವಾರಿ ವೇಗ ಪಡೆಯುತ್ತಿದೆ. ಆದರೂ, ಎರಡು ವರ್ಷದಲ್ಲಿ ಎಲ್ಲಾ ಬಾಕಿ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು ಎಂಬ ಇಲಾಖೆಯ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಪರಿಣಾಮ ಇನ್ನೂ 22,967 ಪ್ರಕರಣಗಳು ಬಾಕಿ ಇವೆ. ಮುಂದಿನ ಮೇ 20ಕ್ಕೆ ಸರ್ಕಾರಕ್ಕೂ ಎರಡು ವರ್ಷ ತುಂಬುತ್ತಿದ್ದು, ಅಷ್ಟರೊಳಗೆ ಈ ಪೈಕಿ ಕನಿಷ್ಟ 10 ರಿಂದ 12 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಿ” ಎಂದರು
ಅಲ್ಲದೆ, “ಸರ್ಕಾರದ ಕಾನೂನಿನಂತೆ ಎಸಿ ನ್ಯಾಯಾಲಯದ ಪ್ರಕಣಗಳನ್ನು ಆರು ತಿಂಗಳ ಒಳಗೆ ಮುಗಿಸಬೇಕು ಎಂಬ ನಿಯಮ ಇದೆ. ಆದರೂ, ನಿಮಯ ಮೀರಿ ಐದು ವರ್ಷಕ್ಕೂ ಮೇಲ್ಪಟ್ಟ 5826ಪ್ರಕರಣಗಳು ಬಾಕಿ ಇದ್ದು, ಈ ಪ್ರಕರಣಗಳನ್ನು ಆದ್ಯತೆ ಮೇರೆ ಶೀಘ್ರ ವಿಲೇವಾರಿಗೊಳಿಸಬೇಕು. ಜೊತೆಗೆ ಉಪ ವಿಭಾಗಾಧಿಕಾರಿಗಳು ತಿಂಗಳಿಗೆ 300 ಹಾಗೂ ವಿಶೇಷ ಉಪ ವಿಭಾಗಾಧಿಕಾರಿಗಳು ತಿಂಗಳಿಗೆ ಕನಿಷ್ಟ 150 ಪ್ರಕರಣಗಳನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
Laxmi News 24×7