Breaking News

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಗೆ ಡಿಪಿಆರ್ ಸಲ್ಲಿಕೆ (

Spread the love

ಹುಬ್ಬಳ್ಳಿ: ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸಿ ವಾಣಿಜ್ಯ ವಹಿವಾಟು ಹೆಚ್ಚಿಸುವ ಮಹತ್ವಾಕಾಂಕ್ಷಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿ ನೈರುತ್ಯ ರೈಲ್ವೆಯು ಅಂದಾಜು 17,141 ಕೋಟಿ ರೂ. ವೆಚ್ಚದ ಪರಿಷ್ಕೃತ ವಿಸ್ತೃತ ಯೋಜನಾ ವರದಿ(ಡಿಪಿಆರ್‌ ) ಯನ್ನು ಇತ್ತೀಚೆಗೆ ರೈಲ್ವೆ ಮಂಡಳಿಗೆ ಸಲ್ಲಿಸಿದೆ.

ಈಗಿರುವ ರಾಷ್ಟ್ರೀಯ ಹೆದ್ದಾರಿ 263 ಪಕ್ಕದಲ್ಲೇ ಜೋಡಿ ಮಾರ್ಗ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಮೊದಲು 595 ಹೆಕ್ಟೇ‌ರ್ ಅರಣ್ಯ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ವರದಿಯಲ್ಲಿ 10 ಹೆಕ್ಟೇರ್‌ನಷ್ಟು ಕಡಿಮೆಗೊಳಿಸಲಾಗಿದೆ. 163 ಕಿ.ಮೀ ಅಂತರದ ಈ ಮಾರ್ಗದಲ್ಲಿ 97 ಕಿ.ಮೀ ಮಾರ್ಗವು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ. ಅದರಲ್ಲಿಯೂ 46.57 ಕಿ.ಮೀ ಅಂತರದಲ್ಲಿ 57 ಸುರಂಗ ನಿರ್ಮಿಸಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ದಟ್ಟ ಅರಣ್ಯ ಹೊಂದಿರುವ ಯಲ್ಲಾಪುರ – ಸುಂಕಸಾಲವರೆಗಿನ ಘಟ್ಟ ಪ್ರದೇಶದಲ್ಲಿ ಬೆಟ್ಟ ಕೊರೆದು ಸುರಂಗಗಳನ್ನು ನಿರ್ಮಿಸಬೇಕಾಗುತ್ತದೆ. ಇದಲ್ಲದೇ ಮಾರ್ಗದ ನಾನಾ ಕಡೆಗಳಲ್ಲಿ ತಗ್ಗು ಪ್ರದೇಶಗಳು, ಹೊಂಡಗಳು ಬರುತ್ತಿದ್ದು, ಒಟ್ಟು 13.89 ಕಿ.ಮೀ ಉದ್ದದಷ್ಟು ಮೇಲ್ಸೇತುವೆಗಳನ್ನು ನಿರ್ಮಿಸಬೇಕಾಗುತ್ತದೆ ಎಂದು ಪ್ರಸ್ತಾಪಿಸಲಾಗಿದೆ.

995 ಹೆಕ್ಟೇ‌ರ್ ಭೂಮಿ ಅಗತ್ಯ: ಹುಬ್ಬಳ್ಳಿ-ಯಲ್ಲಾಪುರ ನಡುವೆ 75 ಕಿ.ಮೀ ಬಯಲು ಪ್ರದೇಶ, ಯಲ್ಲಾಪುರದಿಂದ ಸುಂಕಸಾಲದವರೆಗೆ 55 ಕಿ.ಮೀ ಘಟ್ಟ ಪ್ರದೇಶವಿದೆ. ಸುಂಕಸಾಲದಿಂದ ಅಂಕೋಲಾವರೆಗೆ ಗುಡ್ಡಗಾಡು ಇದೆ. ಯೋಜನೆಗೆ ಒಟ್ಟು 995 ಹೆಕ್ಟೇ‌ರ್ ಭೂಮಿ ಬೇಕಾಗುತ್ತದೆ. ಇದರಲ್ಲಿ 585 ಹೆಕ್ಟೇರ್ ಅರಣ್ಯ, 184 ಹೆಕ್ಟೇರ್ ನೀರಾವರಿ ಭೂಮಿ ಹಾಗೂ 185 ಹೆಕ್ಟೇರ್ ಒಣಭೂಮಿ, 1.40 ಹೆಕ್ಟೇರ್ ನಗರ ಪ್ರದೇಶ ಒಳಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಈ ಮಾರ್ಗದಿಂದ ಕಲ್ಲಿದ್ದಲು, ಕಬ್ಬಿಣ ಅದಿರು, ಆಹಾರ ಧಾನ್ಯ ಮೊದಲಾದ ಸರಕು ಸಾಗಿಸಬಹುದಾಗಿದೆ. ಕರಾವಳಿ ಬಂದರುಗಳಿಂದ ರಫ್ತು ವಹಿವಾಟು ಹೆಚ್ಚಿಸಲು ಹಾಗೂ ಪ್ರವಾಸೋದ್ಯಮಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಯೋಜನೆಯನ್ನು ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಇಲಾಖೆಯಿಂದ 50:50 ಅನುಪಾತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ