ಬೆಳಗಾವಿ: ಮಾವಿನ ಹಣ್ಣಿನ ಸೀಸನ್ ಶುರುವಾಗಿದ್ದು, ಜನರು ಮಾವಿನ ರುಚಿ ಸವಿಯಲು ಕಾತುರರಾಗಿದ್ದಾರೆ. ಆದರೆ, ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಕಾರಣ ದರ ಕೇಳಿ ಗ್ರಾಹಕರು ಹೌಹಾರುತ್ತಿದ್ದಾರೆ.
ತರಹೇವಾರಿ ಮಾವು ಮಾರುಕಟ್ಟೆಗೆ ಬಂದಿವೆ. ಪ್ರಮುಖವಾಗಿ ರತ್ನಗಿರಿ, ದೇವಗಡ, ಆಪೂಸ್ (ಆಲ್ಫೊನ್ಸೋ), ರಸಪುರಿ, ಫೈರಿ ಸೇರಿದಂತೆ ವಿವಿಧ ತಳಿಯವು ಮಾರುಕಟ್ಟೆಯಲ್ಲಿವೆ. ಸದ್ಯಕ್ಕೆ ಆಪೂಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ದುಬಾರಿಯಾಗಿದೆ. ಒಂದು ಡಜನ್ ಮಾವಿನ ಹಣ್ಣಿನ ಬೆಲೆ 1,000 ದಿಂದ 3700 ರೂ.ವರೆಗೂ ಇದೆ. ದರ ಹೆಚ್ಚಳವಾಗಿದ್ದರೂ ಚೌಕಾಸಿ ಮಾಡಿ ಗ್ರಾಹಕರು ಖರೀದಿಸುತ್ತಿದ್ದಾರೆ.
“ಮಾವಿನ ಹಣ್ಣಿನ ಪೂರೈಕೆ ಕಡಿಮೆ ಇದೆ. ಹಾಗಾಗಿ, ದರ ಹೆಚ್ಚಳವಾಗಿದೆ. ಮುಂದಿನ 15 ದಿನಗಳಲ್ಲಿ ತೋತಾಪುರಿ, ಬದಾಮಿ ಸೇರಿದಂತೆ ಮತ್ತಿತರ ತಳಿಗಳ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರಲಿವೆ” ಎನ್ನುತ್ತಾರೆ ವ್ಯಾಪಾರಸ್ಥರು.3,400 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ: ಕೃಷಿ ಮತ್ತು ತೋಟಗಾರಿಕೆಗೆ ಖ್ಯಾತಿ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ತರಕಾರಿ ಬೆಳೆ ಹೇರಳವಾಗಿ ಬೆಳೆಯಲಾಗುತ್ತದೆ. ಅದೇ ರೀತಿ ಮಾವಿಗೂ ಉತ್ತಮ ಮಾರುಕಟ್ಟೆ ಲಭಿಸುತ್ತಿರುವ ಕಾರಣ ಜಿಲ್ಲೆಯ ರೈತರು ಮಾವಿನ ಬೆಳೆಯತ್ತಲೂ ಮುಖ ಮಾಡಿದ್ದು, ಜಿಲ್ಲೆಯಲ್ಲಿ ಸುಮಾರು 3,400 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗಿದೆ.