ಬೆಂಗಳೂರು: “ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಆಲಮಟ್ಟಿ ಜಲಾಶಯ ಎತ್ತರಿಸಲು ಆಗಬೇಕಾದ ಭೂಸ್ವಾಧೀನ, ಕಲ್ಪಿಸಬೇಕಾದ ಪರಿಹಾರ ಹಾಗೂ ಪರಿಷ್ಕೃತ ಮೊತ್ತಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯರಾದ ಪಿ.ಎಚ್.ಪೂಜಾರ್ ಹಾಗೂ ಹನುಮಂತ ರುದ್ರಪ್ಪ ನಿರಾಣಿ ಕೇಳಿದ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು.
“ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂತ್ರಸ್ತರೊಂದಿಗೆ ಚರ್ಚಿಸಲಾಗಿದೆ. ಚರ್ಚೆಯ ವೇಳೆ ಭೂಸ್ವಾಧೀನ ಹಾಗೂ ಪುನರ್‌ವಸತಿ ಕುರಿತಂತೆ ಕೈಗೊಂಡ ನಿರ್ಣಯಗಳು, ಒಪ್ಪಂದ ಹಾಗೂ ಯೋಜನೆಗೆ ಪರಿಷ್ಕೃತ ಅಂದಾಜು ಮೊತ್ತದ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗುತ್ತದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಲ್ಲಿ 1,33,867 ಲಕ್ಷ ಎಕರೆ ಭೂಸ್ವಾಧೀನವಾಗಲಿದೆ. ಈ ಪೈಕಿ 28,903 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಾಕಿ 1,04,964 ಎಕರೆ ಭೂಮಿಯನ್ನು ಹಂತ-ಹಂತವಾಗಿ ಸ್ವಾಧೀನಪಡಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಸದ್ಯ ಶೇ.53ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ” ಎಂದರು.
“ಆಲಮಟ್ಟಿ ಜಲಾಶಯ ನೀರಿನ ಸಂಗ್ರಹಣೆ ಮಟ್ಟ 519.60 ಮೀಟರ್ನಿಂದ 524.256 ಮೀಟರ್ಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಅಂತಿಮ ತೀರ್ಪಿನ ಬಗ್ಗೆ ಕೇಂದ್ರವು ಗೆಜೆಟ್ ನೋಟಿಫಿಕೇಷನ್ ಇನ್ನಷ್ಟೇ ಹೊರಡಿಸಬೇಕಿದೆ” ಎಂದು ಹೇಳಿದರು.
“ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್ ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು
Laxmi News 24×7