ಬೆಂಗಳೂರು: ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ ಹಲವೆಡೆ ಮಳೆ ಮುಂದುವರೆದಿದ್ದು, ಹಳ್ಳಕೊಳ್ಳಗಳು ತುಂಬುತ್ತಿವೆ. ಕೆಲವೆಡೆ ಪ್ರವಾಹ ಪರಿಸ್ಥಿತಿಯೂ ಕಂಡುಬರಲು ಶುರುವಾಗಿದೆ. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತಿದೆ.
ಇಂದು ನಡೆದ ಡಿಸಿಗಳ ಸಭೆಯಲ್ಲಿ ಮಳೆ ಮತ್ತು ಪ್ರವಾಹ ಸಂಬಂಧ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, ಹೆಚ್ಚು ಮಳೆ ಆಗುತ್ತಿರುವ ಪ್ರದೇಶದಲ್ಲಿ ಜನರ ಸ್ಥಳಾಂತರಕ್ಕೆ ಮೊದಲೇ ಸ್ಥಳ ಗುರುತಿಸುವಂತೆ ಸೂಚಿಸಿದರು. ಮಹಾರಾಷ್ಟ್ರದ ಕೋಲ್ಹಾಪುರ ಡಿಸಿ ಜೊತೆ ಸತತ ಸಂಪರ್ಕದಲ್ಲಿದ್ದು, ಕೃಷ್ಣಾ ನದಿಗೆ ಹರಿದುಬರುವ ನೀರಿನ ಪ್ರಮಾಣದ ಕುರಿತು ಜಾಗ್ರತೆ ವಹಿಸಿ ಎಂದಿದ್ದಾರೆ. ಅಲ್ಲದೇ ರಾಜಾಪೂರ ಬ್ಯಾರೇಜಿನಲ್ಲಿ ರಾಜ್ಯದ ಎಂಜಿನಿಯರ್ ಒಬ್ಬರನ್ನು ನಿಯೋಜಿಸುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂಗೆ ಒಳಹರಿವು ಹೆಚ್ಚಿರುವ ಕಾರಣ ಐದು ಕ್ರೆಸ್ಟ್ ಗೇಟ್‍ಗಳನ್ನು ಓಪನ್ ಮಾಡಲಾಗಿದ್ದು, 35 ಸಾವಿರ ಕ್ಯೂಸೆಕ್ ನೀಡನ್ನು ಹೊರಬಿಡಲಾಗ್ತಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ವಡಗೇರಾ ಬಳಿಯ ಕೃಷ್ಣಾ ನದಿಪಾತ್ರದಲ್ಲಿ ಮೊಸಳೆ ಕಾಟ ಹೆಚ್ಚಾಗಿದೆ.