ಧಾರವಾಡದ ಕಲಘಟಗಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ… ಅಕ್ರಮವಾಗಿ ಸ್ಪಿರಿಟ್ ಸಾಗಾಟ, ಓರ್ವನ ಬಂಧನ

ಟ್ಯಾಂಕರ್ ವಾಹನದ ನಂಬರ್ ಪ್ಲೇಟ್‌ನ್ನೇ ಚೇಂಜ್ ಮಾಡಿ, ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ ಸಮೇತ ಚಾಲಕನೊಬ್ಬನನ್ನು ಅಬಕಾರಿ ಇಲಾಖೆ ಸಿಬ್ಬಂದಿ ಧಾರವಾಡದ ಕಲಘಟಗಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ಮೂಲಕ ಟ್ಯಾಂಕರ್ ವಾಹನದಲ್ಲಿ ಸ್ಪಿರಿಟ್‌ನ್ನು ಗೋವಾಕ್ಕೆ ಸಾಗಿಸಲಾಗುತ್ತಿತ್ತು. ಈ ಟ್ಯಾಂಕರ್ ಚಾಲಕ ವಾಹನದ ನಂಬರ್ ಪ್ಲೇಟ್ ಚೇಂಜ್ ಮಾಡಿ ಸ್ಪಿರಿಟ್ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಗೋವಾಕ್ಕೆ ಸ್ಪಿರಿಟ್ ಸಾಗಿಸುವಾಗಲೇ ಟ್ಯಾಂಕರ್ ಚಾಲಕ ಓಂಪ್ರಕಾಶ್ ಎಂಬಾತನನ್ನು ಬಂಧಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ಅಕ್ರಮವಾಗಿ ಸ್ಪಿರಿಟ್ ಗೋವಾಕ್ಕೆ ಸಾಗಿಸಲಾಗುತ್ತಿದ್ದ ಅಂಶವನ್ನು ಬಂಧಿತ ಚಾಲಕ ಓಂಪ್ರಕಾಶ ಬಾಯಿ ಬಿಟ್ಟಿದ್ದಾನೆ. ಸದ್ಯ ವಾಹನ ಸಂಖ್ಯೆ ಜಿಜೆ-39 ಟಿ-2941ರ ಸ್ಪಿರಿಟ್ ತುಂಬಿದ ಟ್ಯಾಂಕರ್ ಸಮೇತ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯ ವಶಪಡಿಸಿಕೊಳ್ಳಲಾಗಿರುವ ಟ್ಯಾಂಕರ್‌ನಲ್ಲಿ 40 ಸಾವಿರ ಲೀಟರ್ ಸ್ಪಿರಿಟ್ ಇತ್ತು. ಅಂದಾಜು 24 ಲಕ್ಷ ಮೌಲ್ಯದ ಸ್ಪಿರಿಟ್ ಇದಾಗಿದೆ. ಇದರೊಟ್ಟಿಗೆ 55 ಲಕ್ಷ ಮೌಲ್ಯದ ಟ್ಯಾಂಕರ್‌ನ್ನೂ ಸೀಜ್ ಮಾಡಲಾಗಿದೆ.
ಸುಖದೇವ ಎಂಬ ಗುಜರಾತ್ ಮೂಲದ ವ್ಯಕ್ತಿ ಈ ಟ್ಯಾಂಕರ್ ಮಾಲೀಕನಾಗಿದ್ದಾನೆ. ಚಾಲಕ ಓಂಪ್ರಕಾಶ್ ಹಾಗೂ ಸುಖದೇವನ ಮೇಲೂ ಅಬಕಾರಿ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಈ ಸ್ಪಿರಿಟ್ ಎಲ್ಲಿಂದ ಬರುತ್ತಿತ್ತು ಎಂಬ ಅಂಶವನ್ನು ತನಿಖೆ ನಂತರ ತಿಳಿಸಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7