ಬೆಳಗಾವಿ: ಹಿಂಡಲಗಾ ಜೈಲಿನ ವತಿಯಿಂದ ಜೈಲಿನ ಹಿತಾಸಕ್ತಿಯಲ್ಲಿ ಅಳವಡಿಸಿದ ಜಾಮರನಿಂದಾಗಿ ಜೈಲಿನ ಅಕ್ಕಪಕ್ಕದ ನಾಗರಿಕರಿಗೆ ನೆಟವರ್ಕ್ ಸಿಗದೇ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಬೆಳಗಾವಿಯ ಹಿಂಡಲಗಾ ಜೈಲಿನ ಮೂಲಕ ಜಾಮರ್ ಅಳವಡಿಸಲಾಗಿದ್ದು, ಜೈಲಿನ ಅಕ್ಕಪಕ್ಕದ ಜನವಸತಿಯಲ್ಲಿಯೂ ನೆಟವರ್ಕ್ ಸಿಗದೇ ಜನರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಈಗಾಗಲೇ ನಾಗರೀಕರು ಜೈಲಿನ ಆಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದು, ಜಾಮರನ ಮಿತಿಯನ್ನು ಕಡಿಮೆಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಕಳೆದ 5 ದಿನಗಳಿಂದ ಹಿಂಡಲಗಾ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಲಕ್ಷ್ಮೀ ನಗರ , ವಿಜಯನಗರ ಸೇರಿದಂತೆ ಹಿಂಡಲಗಾ ಜೈಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಟವರ್ಕ್ ಸಿಗದೇ ಜನರ ಪರದಾಡುವಂತಾಗಿದೆ. ಸಂಪರ್ಕ ಸಿಗದೇ, ಗೂಗಲ್ ಪೇ, ಫೋನ್ ಪೇ ದಂತಹ ಬ್ಯಾಂಕಿನ ಟ್ರಾನ್ಸಾಕ್ಷನಗಳು ಆಗದೇ ಜನರಿಗೆ ತೊಂದರೆ
ಅನುಭವಿಸುವಂತಾಗುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿನ ಆನಲೈನ ಕೆಲಸಗಳು ಆಗದೇ, ಪರಿತಪಿಸುವಂತಾಗಿದೆ. ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸದಿದ್ದರೇ, ವೆಂಗುರ್ಲಾ ರಸ್ತೆಯನ್ನು ತಡೆದು ಪ್ರತಿಭಟಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಇನ್ನು ವಿದ್ಯಾರ್ಥಿಗಳ ಓದಿಗೂ ತೊಂದರೆಯಾಗುತ್ತಿದೆ. ನೆಟವರ್ಕ್ ಇಲ್ಲದೇ, ಮಾಹಿತಿ ಸಿಗದಾಗಿದೆ. ಗ್ರಾಮ ಪಂಚಾಯಿತಿಯಲ್ಲಿಯೂ ಸರ್ವರ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಇದನ್ನ ಕೂಡಲೇ ಪರಿಹರಿಸಬೇಕೆಂಬುದು ಜನರ ಒತ್ತಾಯವಾಗಿದೆ.
ಒಟ್ಟಾರೆ ಹಿಂಡಲಗಾ ಜೈಲು ಜೈಲಿನ ಹಿತದಲ್ಲಿ ತೆಗೆದುಕೊಂಡ ಕ್ರಮದಿಂದ ಜೈಲಿನ ಹೊರಗಿನ ಜನತೆಗೆ ತೊಂದರೆಯಾಗುತ್ತಿದ್ದು, ಜಾಮರ್ ಮಿತಿಯನ್ನು ಕಡಿಮೆಗೊಳಿಸಬೇಕೆಂಬುದು ಜನರ ಬೇಡಿಕೆಯಾಗಿದೆ.