ಬೆಂಗಳೂರು: “ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ದಿನ ಬೆಳಗಾದರೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾರವಾಗಿಯೇ ಪ್ರತಿಕ್ರಿಯಿಸಿದರು. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಭಾನುವಾರ ಉತ್ತರಿಸಿದರು. ಸಿದ್ದರಾಮಯ್ಯ ಅವರು ಪಕ್ಷಕ್ಕೆ ಅನಿವಾರ್ಯ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರು ಎಲ್ಲ ಚುನಾವಣೆಗೂ ಬೇಕು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನಸಭೆ, ಸಂಸತ್ ಚುನಾವಣೆ ಎಲ್ಲದಕ್ಕೂ ಬೇಕು. ಅವರನ್ನು ಪಕ್ಷ 2 ಬಾರಿ ಸಿಎಂ ಮಾಡಿದೆ. ಸಿದ್ದರಾಮಯ್ಯ ಅವರು 2ನೇ ಬಾರಿಗೆ ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದು, ಅವರ ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಗೊಂದಲದ ಹೇಳಿಕೆ ಬೇಡ” ಎಂದು ತಿಳಿಸಿದರು.
ಪಕ್ಷದಲ್ಲಿ ಗೊಂದಲದ ಹೇಳಿಕೆ ಯಾಕೆ ಎಂದು ಕೇಳಿದಾಗ, “ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ದಿನ ನಿತ್ಯ ಎಲ್ಲವನ್ನು ಗಮನಿಸುತ್ತಿದೆ” ಎಂದು ತಿಳಿಸಿದರು.