ಹಾವೇರಿ: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ. ಒಂದೆಡೆ ರೈತ ಮಹಿಳೆಯೊಬ್ಬರು ಹಾವು ಕಚ್ಚಿ ಮೃತಪಟ್ಟರೆ ಇನ್ನೊಂದೆಡೆ ಜೇನು ಹುಳು ಕಡಿದು ರೈತ ಮೃತಪಟ್ಟ ಘಟನೆ ನಡೆದಿದೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆ ಮೃತಪಟ್ಟ ಘಟನೆ ಹಾನಗಲ್ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೃತ ರೈತ ಮಹಿಳೆಯನ್ನು 45 ವರ್ಷದ ರೇಣುಕಾ ಮರೆಯಪ್ಪನವರ್ ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಮೃತ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ರೈತ ಮಹಿಳೆಗೆ ಪರಿಹಾರ ಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಹೋದಾಗ ರೈತನ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಅಸ್ವಸ್ಥಗೊಂಡ ರೈತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆೆ. ರಾಣೇಬೆನ್ನೂರು ತಾಲೂಕಿನ ಮೈದೂರು ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು 59 ವರ್ಷದ ಸುರೇಶಗೌಡ ಪಾಟೀಲ್ ಎಂದು ಗುರುತಿಸಲಾಗಿದೆ.
ವಾರದ ಹಿಂದೆ ಬೆಳೆಗಳಿಗೆ ನೀರು ಹಾಯಿಸಲು ಹೋದಾಗ ಹೆಜ್ಜೇನು ದಾಳಿಯಾಗಿತ್ತು. ಕೂಡಲೇ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೇ ರೈತ ಮೃತಪಟ್ಟಿದ್ದಾನೆ ಎಂದು ಮೃತ ರೈತನ ಸಂಬಂಧಿಕರು ತಿಳಿಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.