Breaking News

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶ

Spread the love

ಬೆಳಗಾವಿ: ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಪಡೆದ ಪ್ರಕರಣದಡಿ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಸೋಮವಾರ ಆದೇಶಿಸಿದ್ದಾರೆ.

ವಾರ್ಡ್ ನಂ.23ರ ಜಯಂತ ಜಾಧವ ಹಾಗೂ ವಾರ್ಡ್‌ ನಂ.41ರ ಸದಸ್ಯ ಮಂಗೇಶ ಪವಾರ ಅವರ ಪಾಲಿಕೆ ಸದಸ್ಯತ್ವ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ್ ಆದೇಶಿಸಿದ್ದಾರೆ

ತಿನಿಸು ಕಟ್ಟೆಗಳ ಹರಾಜಿನಲ್ಲಿ ಸದಸ್ಯ ಜಯಂತ ಜಾಧವ ಅವರು ತಮ್ಮ ಪತ್ನಿ ಸೋನಾಲಿ ಜಾಧವ ಹಾಗೂ ಮಂಗೇಶ ಪವಾರ ಅವರು ತಮ್ಮ ಪತ್ನಿ ನೀತಾ ಪವಾರ ಹೆಸರಿನಲ್ಲಿ ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದರು. ಪಾಲಿಕೆ ಸದಸ್ಯರಾಗುವ ಮುನ್ನವೇ ಅವರು ಬಾಡಿಗೆ ಪಡೆದುಕೊಂಡಿದ್ದರು. ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಅದನ್ನು ವಾಪಸ್​ ನೀಡಿರಲಿಲ್ಲ. ಚುನಾಯಿತ ಸದಸ್ಯರಾಗಿದ್ದರೂ ಪಾಲಿಕೆಯಿಂದ ಲಾಭ ಪಡೆದಿದ್ದಾರೆ. ಹಾಗಾಗಿ, ಇಬ್ಬರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ 2023ರ ನವೆಂಬರ್ 9ರಂದು ದೂರು ನೀಡಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಪಾಲಿಕೆ ಸದಸ್ಯತ್ವ ರದ್ದುಪಡಿಸಿದ್ದಾರೆ.

ನಗರಸೇವಕರಾಗಿ ಚುನಾಯಿತರಾದ ನಂತರ ಹರಾಜಿನಲ್ಲಿ ಪಡೆಯಲಾದ ಮಳಿಗೆಗಳನ್ನು ಮಹಾನಗರ ಪಾಲಿಕೆಗೆ ಅವರು ಬಿಟ್ಟುಕೊಡಬೇಕಾಗಿತ್ತು. ಆದರೆ, ಹಾಗೆ ಮಾಡದೇ ಆ ಮಳಿಗೆಗಳನ್ನು ತಮ್ಮ ಕುಟುಂಬದ ಸದಸ್ಯರ ಬಳಿಯೇ ಉಳಿಸಿಕೊಂಡಿದ್ದಾರೆ. ಇದರಿಂದ ಇಬ್ಬರೂ ಸದಸ್ಯರು ಪರೋಕ್ಷವಾಗಿ ಮಹಾನಗರ ಪಾಲಿಕೆಯಿಂದ ಲಾಭ ಪಡೆದಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976 ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳುಗುಂದ, “1976 1ಕೆ ಮತ್ತು ಸಿ ಪ್ರಕಾರ ಮಳಿಗೆಗಳನ್ನು ಬಿಟ್ಟುಕೊಡಬೇಕಿತ್ತು. ಬಡ ಜನರಿಗೆ ಸಿಗಬೇಕಾದ ಮಳಿಗೆಗಳನ್ನು ತಾವು ತೆಗೆದುಕೊಂಡಿದ್ದರು. ಹಾಗಾಗಿ, ನಾನು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದೆ. ಅವರು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ವರದಿ‌ ಕೊಡುವಂತೆ ತಿಳಿಸಿದ್ದರು. ಆ ವರದಿಯಲ್ಲಿ ಅವರು ತಪ್ಪು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತರು ಇಬ್ಬರ ಸದಸ್ಯತ್ವ ರದ್ದುಪಡಿಸಿದ್ದಾರೆ. ಈ ಮೂಲಕ ಬೆಳಗಾವಿಯ ನಿರ್ಗತಿಕರು, ಬಡವರು, ಮಹಿಳೆಯರಿಗೆ ನ್ಯಾಯ ಸಿಕ್ಕಂತೆ ಆಗಿದೆ. ಇದನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಇಬ್ಬರೂ ನಗರಸೇವಕರು ಪಡೆದುಕೊಂಡ ಸೌಲಭ್ಯಗಳನ್ನು ಮರುಕಳಿಸುವವರೆಗೂ ಹೋರಾಟ ಮುಂದುವರೆಸುತ್ತೇನೆ” ಎಂದರು.


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ