ಹಾವೇರಿ : ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ ಬಳಿಕ ಆಸ್ಪತ್ರೆಯಿಂದ ಊರಿಗೆ ಶವ ತರುತ್ತಿರುವಾಗ ಮತ್ತೆ ಪ್ರಾಣ ಬಂದಿರುವ ಆಶ್ಚರ್ಯಕರ ಘಟನೆ ಶಿಗ್ಗಾಂವ್ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.
45 ವರ್ಷದ ಬಿಷ್ಟಪ್ಪ ಗುಡಿಮನಿ ಸಾವನ್ನಪ್ಪಿ ಬಳಿಕ ಬದುಕುಳಿದಿರುವ ವ್ಯಕ್ತಿ. ”ನಿನ್ನ ಡಾಬಾ ಬಂತು, ನಿನ್ನ ಅಂಗಡಿನೂ ಬಂತು ನೋಡು ಅಂತ ಸಣ್ಣ ಮಗ ಹೇಳಿದಾಗ ಹಾ.. ಅಂತ ಅಂದಾನ. ಆಗ ತಕ್ಷಣನೇ ಉಸಿರಾಡ್ತಿದಾನೆ, ಕಣ್ಣು ಬಿಟ್ಟಾನ ಅನ್ನೋದು ಗೊತ್ತಾಗಿದೆ. ತಕ್ಷಣ ಅಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿ ಶಿಗ್ಗಾಂವಿ ಆಸ್ಪತ್ರೆಗೆ ಕರೆದುಕೊಂಡು ಹೋಗ್ಯಾರ. ಡಾಕ್ಟರು ವೆಂಟಿಲೇಟರ್ ಹಚ್ಚಿದ್ರು ರೀ, ನಂತ್ರ ಎರಡ್ಮೂರು ತಾಸು ಇರ್ತೇತಿ, ಆ ನಂತರ ಹೋಗ್ತೈತಿ ಅಂತಾ ಹೇಳಿ ಕಳಿಸಿದ್ರು ರಿ. ನಮ್ಮ ಮನೆಯವರು ಸತ್ತೋಗಿದಾನೆ ಅಂತಾ ಕರೆದುಕೊಂಡು ಬರ್ತಾ ಇದ್ರು. ಡಾಕ್ಟರ್ ಅವರು ಬಿಷ್ಟಪ್ಪನ ಪತ್ನಿ, ಮಗನ ಮುಂದನ ಹೇಳ್ಯಾರ, ಆಗ ಇವರು ಮನೆಗೆ ಕರೆದುಕೊಂಡ ಬರ್ತಾ ಇದ್ರು ಅಂತಾ ಬಿಷ್ಟಪ್ಪನ ತಾಯಿ ಗಂಗಮ್ಮ ಮಾಧ್ಯಮದವರ ಎದುರು ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.
ಕೂಡಲೇ ಆಂಬ್ಯುಲೆನ್ಸ್ ನಿಲ್ಲಿಸಿ ಬಿಷ್ಟಪ್ಪನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಈಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಷ್ಟಪ್ಪ ನಿಧನ ಸುದ್ದಿ ಬ್ಯಾನರ್, ವಾಟ್ಸಪ್ ಗ್ರೂಪನಲ್ಲಿ ಓಂ ಶಾಂತಿ ಎಂದು ಸಂಬಂಧಿಕರು ಹಾಕಿದ್ದರು. ಇದೀಗ ಆತನಿಗೆ ಮರುಜೀವ ಬಂದಿದ್ದು ದೇವರ ಪವಾಡ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.