ಬೆಳಗಾವಿ: ಈ ಬಾರಿ ಭರತ ಹುಣ್ಣಿಮೆ ವೇಳೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತದ ವತಿಯಿಂದ ಜನಸಂದಣಿ ನಿರ್ವಹಣೆಗೆ ಪಾರ್ಕಿಂಗ್, ಶೌಚಾಲಯ, ಎಲ್.ಇ.ಡಿ. ಸ್ಕ್ರೀನ್ ಅಳವಡಿಕೆ ಸೇರಿದಂತೆ ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಚಿವ ಹೆಚ್. ಕೆ. ಪಾಟೀಲ ಹೇಳಿದರು.
ದಾಸೋಹ ಭವನಕ್ಕೆ ಒಂದು ತಿಂಗಳಲ್ಲಿ ಶಂಕುಸ್ಥಾಪನೆ; ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದಾಸೋಹ ಭವನ ಮತ್ತು ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಿನಲ್ಲಿ ಶಂಕುಸ್ಥಾಪನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಆಂಧ್ರಪ್ರದೇಶದ ತಿರುಪತಿಯ ಟಿಟಿಡಿ ಮಾದರಿಯಲ್ಲಿ ಅಭಿವೃದ್ಧಿಯನ್ನು ಮಾದರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗುವುದು. ಸವದತ್ತಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ, ಸಣ್ಣಪುಟ್ಟ ಕಾನೂನಾತ್ಮಕ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆಹರಿಸಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ ಅಭಿವೃದ್ಧಿ; ಕೇಂದ್ರದಿಂದ ನೂರು ಕೋಟಿ ರೂಪಾಯಿ ಮಂಜೂರಾಗಿದೆ. ಇದು ಮಾತ್ರವಲ್ಲದೇ ₹20 ಕೋಟಿ ಪ್ರಸಾದ ಯೋಜನೆಯಡಿ ಮಂಜೂರಾಗಿದೆ. ಅಲ್ಲದೇ ರಾಜ್ಯ ಸರ್ಕಾರದಿಂದ ಕೂಡ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ವಸತಿ ಗೃಹ, ದಾಸೋಹ ಭವನ, ಮೂಲಸೌಕರ್ಯಗಳನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಬಹುತೇಕ ಸಿದ್ಧವಾಗಿದೆ. ವೆಬ್ಸೈಟ್ ನಲ್ಲೂ ಪ್ಲಾನ್ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಸಚಿವ ಹೆಚ್. ಕೆ. ಪಾಟೀಲ ಮಾಹಿತಿ ನೀಡಿದರು.
ಸವದತ್ತಿ ಗುಡ್ಡದಲ್ಲಿ ಬಯಲು ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಸಚಿವರು ವಿವರಿಸಿದರು.