ಹುಬ್ಬಳ್ಳಿ, ಫೆಬ್ರವರಿ 03: ಹುಬ್ಬಳ್ಳಿಯ (Hubballi) ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ನೇಹಾ ಹಿರೇಮಠ ಹಂತಕನಿಗೆ ಶಿಕ್ಷೆಯಾಗಿಲ್ಲ. 120 ದಿನಗಳಲ್ಲಿ ನೇಹಾಳ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆದರೆ, ಇನ್ನೂವರೆಗೂ ನ್ಯಾಯ ದೊರೆತಿಲ್ಲ. ನೇಹಾ ಕೊಲೆ ಹಿಂದೆ ಶಾಸಕರ ಕೈವಾಡವಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಆಗ್ರಹಿಸಿದರು.
2024ರ ಎಪ್ರಿಲ್ 18 ರಂದು ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ವಿದ್ಯಾರ್ಥಿನಿ ನೇಹಾಳ ಕೊಲೆಯಾಗಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ನಿರಂಜನ ಹಿರೇಮಠ ಅವರ ಮಗಳು ನೇಹಾಳನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ಫಯಾಜ್ ನೇಹಾಳನ್ನು ಕೊಲೆ ಮಾಡಿದ್ದನು. ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೊಲೆ ಆರೋಪಿ ಫಯಾಜ್ನನ್ನು ಕೆಲವೇ ಕ್ಷಣಗಳಲ್ಲಿ ಪೊಲೀಸರು ಬಂಧಿಸಿದ್ದರು.
ವಿದ್ಯಾರ್ಥಿನಿ ನೇಹಾಳ ಕೊಲೆ ಮಾತ್ರ ರಾಜ್ಯ ಸರ್ಕಾರಕ್ಕೆ ದೊಡ್ಡಮಟ್ಟದ ಇರಿಸುಮುರಿಸು ಮಾಡಿತ್ತು. ನೇಹಾಳ ಕೊಲೆ ಖಂಡಿಸಿ ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದವು. ಅಲ್ಲದೆ, ಕಾಂಗ್ರೆಸ್ ಮುಖಂಡ ಮತ್ತು ಪಾಲಿಕೆ ಸದಸ್ಯ, ನೇಹಾ ತಂದೆ ನಿರಂಜನ್ ಹಿರೇಮಠ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿ, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದರು.