ಮೈಸೂರು : ಮೈಕ್ರೋ ಫೈನಾನ್ಸ್ ಕಂಪನಿಯವರು ಸಾಲಗಾರರಿಗೆ ನೀಡುತ್ತಿರುವ ಹಿಂಸೆ ಹಾಗೂ ದೌರ್ಜನ್ಯ ನಿಲ್ಲಬೇಕೆಂದು ಒತ್ತಾಯಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಒನಕೆ ಹಿಡಿದು ವಿನೂತನವಾಗಿ ಭಾನುವಾರ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ರಾಜ್ಯಗಳ ಕಪ್ಪು ಹಣ ತಂದು ರಾಜ್ಯದ ಜನರಿಗೆ ಹಿಂಸೆ ಕೊಡುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ತಲೆ ಎತ್ತಿರುವ ಅಕ್ರಮ ಫೈನಾನ್ಸ್ ಕಂಪನಿಗಳನ್ನು ರದ್ದು ಮಾಡಬೇಕು. ಫೈನಾನ್ಸ್ ಕಂಪನಿಗಳ ವಿರುದ್ಧ ನಿವೃತ್ತ ನ್ಯಾಯಾಧೀಶರನ್ನ ನೇಮಕ ಮಾಡಿ ತನಿಖೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ. ಕರ್ನಾಟಕ ಬಂದ್ಗೂ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾರಿ ನಿರ್ದೇಶನಾಲಯದವರೇ, ನಿಮಗೆ ತಾಕತ್ತಿದ್ದರೆ ಮೈಕ್ರೋ ಫೈನಾನ್ಸ್ನ ಮೇಲೆ ದಾಳಿ ಮಾಡಿ. ಮೈಕ್ರೋ ಫೈನಾನ್ಸ್ ಸಾಲ ದೌರ್ಜನ್ಯ ನಿಲ್ಲಿಸಿ. ಹಿಂಸೆ ಕೊಡಬಾರದು, ಮನೆಗಳಿಗೆ ಬೀಗ ಹಾಕಬಾರದು, ಆತ್ಮಹತ್ಯೆ ಮಾಡಿಕೊಂಡವರಿಗೆ ಒಂದೊಂದು ಕೋಟಿ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಅಸಲಿಗಿಂತ ಬಡ್ಡಿ ವಸೂಲಿ ಜಾಸ್ತಿಯಾಗಿರುವುದರಿಂದ, ಸಮಗ್ರವಾಗಿ ತನಿಖೆ ಆಗಬೇಕು. ರೌಡಿಗಳ ಮೂಲಕ ಬೆದರಿಕೆ ಹಾಕುವುದು, ಮನೆಗೆ ನುಗ್ಗುವುದು, ಮನೆಗಳಿಗೆ ಬೀಗ ಹಾಕುವುದು ನಿಲ್ಲಬೇಕು. ಇದುವರೆಗೂ ಮೈಕ್ರೋ ಫೈನಾನ್ಸ್ ಸಾಲದಿಂದ ಆಗಿರುವ ಸಾವು-ನೋವುಗಳ ಬಗ್ಗೆ ಉನ್ನತಮಟ್ಟದ ತನಿಖೆ ಆಗಲೇಬೇಕು. ಸರ್ಕಾರ ಇಡೀ ರಾಜ್ಯಾದ್ಯಂತ ತೀವ್ರ ಎಚ್ಚರ ವಹಿಸಬೇಕು. ಆತ್ಮಹತ್ಯೆ ನಿಲ್ಲಬೇಕು, ಮೀಟರ್ ಬಡ್ಡಿ ದುರಂತ ತಪ್ಪಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.