ವಿವಿಧ ಕ್ಷೇತ್ರಗಳ 9 ಸಾಧಕರಿಗೆ ‘ವೇದಾಂತ ಎಕ್ಸ್‌ಲೆನ್ಸ್ ಅವಾರ್ಡ್’ ಪ್ರದಾನ
‘ಪುರಸ್ಕಾರದಿಂದ ಕ್ರಿಯಾಶೀಲತೆ ಹೆಚ್ಚಳ’
ಬೆಳಗಾವಿ: ‘ವಿವಿಧ ರಂಗಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ ನೀಡಿರುವ ಕಾರ್ಯ ಶ್ಲಾಘನೀಯ. ಇದರಿಂದ ತಮ್ಮ ಜವಾಬ್ದಾರಿ ಹೆಚ್ಚಿದ್ದು, ಇನ್ನಷ್ಟು ಕ್ರಿಯಾಶೀಲ, ಪ್ರಾಮಾಣಿಕವಾಗಿ ತಾವು ಸೇವೆ ಸಲ್ಲಿಸಲು ಉತ್ಸಾಹ ಬರುತ್ತದೆ’ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ.ಭಜಂತ್ರಿ ಹೇಳಿದರು.
ಇಲ್ಲಿನ ಮಹಿಳಾ ವಿದ್ಯಾಲಯದಲ್ಲಿ ವೇದಾಂತ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ 2025ನೇ ಸಾಲಿನ ‘ವೇದಾಂತ ಎಕ್ಸ್‌ಲೆನ್ಸ್ ಅವಾರ್ಡ್’ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಮಗು ಹುಟ್ಟಿದರೆ ಹೆತ್ತೊಡಲು ಸಂಭ್ರಮಿಸುವಂತಿರಬೇಕು. ನಾವು ಸಾಧನೆ ಮಾಡಿದರೆ ಜಗತ್ತು ಸಂಭ್ರಮಪಡಬೇಕು. ಅಂಥ ಸಾಧಕರನ್ನು ವೇದಾಂತ ಫೌಂಡೇಷನ್ ಗುರುತಿಸುತ್ತಿರುವುದು ಉತ್ತಮ ಹೆಜ್ಜೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನೂ ಕಲಿಸಬೇಕು’ ಎಂದು ಕರೆಕೊಟ್ಟರು.
ವೇದಾಂತ ಫೌಂಡೇಷನ್ ಸಂಸ್ಥಾಪಕ ಸತೀಶ ಪಾಟೀಲ, ‘ಶಿಕ್ಷಕರು, ಆರಕ್ಷಕರು ಮತ್ತು ಪೊಲೀಸರು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಶಿಕ್ಷಕರು ಅಕ್ಷರದ ಮೂಲಕ ಮಕ್ಕಳ ಭವಿಷ್ಯ ರೂಪಿಸಿದರೆ, ಪೊಲೀಸರು ಹಗಲಿರೆಳೆನ್ನದೇ ಸಮಾಜದ ರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಪತ್ರಕರ್ತರು ಸಾಮಾಜಿಕ ವ್ಯವಸ್ಥೆಯಲ್ಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಜನರಿಗೆ ನ್ಯಾಯ ಕೊಡಿಸುವ ಕೆಲಸದಲ್ಲಿ ನಿರತವಾಗಿದ್ದಾರೆ. ಈ ಮೂರು ವರ್ಗಗಳ ಸಾಧಕರಿಗೆ ಪುರಸ್ಕಾರ ಕೊಟ್ಟಿದ್ದು ಸಂತಸದ ಸಂಗತಿ’ ಎಂದರು.
ಪ್ರಶಸ್ತಿ ಪುರಸ್ಕೃತರು ವೃತ್ತಿ ಅನುಭವ ಹಂಚಿಕೊಂಡರು. ಫೌಂಡೇಷನ್ ಅಧ್ಯಕ್ಷೆ ಸವಿತಾ ಚಂದಗಡಕರ, ಉಪಾಧ್ಯಕ್ಷ ಎನ್.ಡಿ.ಮಾದರ, ಉದ್ಯಮಿ ಶ್ರೀಕಾಂತ ಅಜಗಾಂವಕರ, ವಿಜಯ ನಂದಿಹಳ್ಳಿ, ಯುವರಾಜ ರತ್ನಾಕರ, ಎಂ.ಪಾಟೀಲ ಇದ್ದರು. ಸಿ.ವೈ.ಪಾಟೀಲ ಮತ್ತು ಶೈಲಜಾ ಬಿ. ನಿರೂಪಿಸಿದರು. ಕಾರ್ಯದರ್ಶಿ ಜಯಶ್ರೀ ಪಾಟೀಲ ನಿರೂಪಿಸಿದರು.
9 ಸಾಧಕರಿಗೆ ಪ್ರಶಸ್ತಿ ಪ್ರದಾನ
ಪತ್ರಕರ್ತರ ವಿಭಾಗದಲ್ಲಿ ಹಿರಿಯ ಪತ್ರಕರ್ತರಾದ ರಮೇಶ ಹಿರೇಮಠ, ರವೀಂದ್ರ ಉಪ್ಪಾರ, ‘ಪ್ರಜಾವಾಣಿ’ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಸಂತೋಷ ಈ. ಚಿನಗುಡಿ, ಪೊಲೀಸರ ವಿಭಾಗದಲ್ಲಿ ಎಪಿಎಂಸಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಬಸವರಾಜ ನರಗುಂದ, ಟಿಳಕವಾಡಿ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಲಾಡಜಿಸಾಬ್ ಮುಲ್ತಾನಿ, ಶಿಕ್ಷಕರ ವಿಭಾಗದಲ್ಲಿ ಮುತಗಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಶಿಕ್ಷಕಿ ಅಂಜುದೇವಿ ಕೇದನೂರಕರ, ಬೆಳಗಾವಿಯ ಮಹಿಳಾ ವಿದ್ಯಾಲಯದ ಮುಖ್ಯಶಿಕ್ಷಕಿ ಕವಿತಾ ಪರಮಾಣಿಕ, ಬಸವನ ಕುಡಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸುನೀಲ್ ದೇಸೂರಕರ, ಮಜಗಾವಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 35ರ ಮುಖ್ಯಶಿಕ್ಷಕ ರಘುನಾಥ ಉತ್ತೂರಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.