ಹುಬ್ಬಳ್ಳಿ: ಪ್ರಯಾಗ್ರಾಜ್ನಲ್ಲಿ ಕಾಲ್ತುಳಿತಕ್ಕೊಳಗಾಗಿ ಸಾವನ್ನಪ್ಪಿದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಮಹಾದೇವಿ ಹನುಮಂತಪ್ಪ ಬಾವನೂರ್ (ಸಂಕನಗೌಡರ್) ಮೃತದೇಹಕ್ಕೆ ಗುರುವಾರ ತಡರಾತ್ರಿ ವೀರಶೈವ ಲಿಂಗಾಯತ ಸಮುದಾಯದ ವಿಧಿವಿಧಾನದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಗುರುವಾರ ರಾತ್ರಿ 10.45ರ ಸುಮಾರಿಗೆ ಬೆಳಗಾವಿಯಿಂದ ನೂಲ್ವಿ ಗ್ರಾಮಕ್ಕೆ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತರಲಾಯಿತು. ಮೃತದೇಹ ತರುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು ಮಹಾದೇವಿ ಅವರ ಮನೆ ಮುಂದೆ ಜಮಾಯಿಸಿದ್ದರು. ಮಹಾದೇವಿ ತಂದೆ ಹನುಮಂತ ಗೌಡ, ಸಹೋದರರಾದ ಬಸವನ ಗೌಡ, ಮಹಾದೇವ ಗೌಡ ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತದೇಹ ಮನೆಗೆ ಆಗಮಿಸುತ್ತಿದ್ದಂತೆ ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿತ್ತು. ತಮ್ಮ ಮನೆ ಮಗಳನ್ನೇ ಕಳೆದುಕೊಂಡ ದುಃಖ ಆವರಿಸಿತ್ತು. ಮೃತದೇಹದ ಜೊತೆಯೇ ಆಗಮಿಸಿದ್ದ ಮಹಾದೇವಿಯ ಪತಿ ಹನುಮಂತಪ್ಪ ಹಾಗೂ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದರು.
ಚಂದ್ರಗೌಡ ಪಾಟೀಲ್ ಹಾಗೂ ವೀರನಗೌಡ ಸಂಕನಗೌಡರ ಪ್ರತಿಕ್ರಿಯೆ ನೀಡಿದ್ದು, ಮಹಾದೇವಿ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.