Breaking News

ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ; ಬೇಸಿಗೆಯಲ್ಲಿ ಲೋಡ ಶೆಡ್ಡಿಂಗ್ ಇಲ್ಲ: ಸಚಿವ ಜಾರ್ಜ್‌

Spread the love

ಬಾಗಲಕೋಟೆ: ತೋಟದಲ್ಲಿರುವ ರೈತರ ಮನೆಗಳಿಗೂ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವ ಚಿಂತನೆ ಇದೆಯೆಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಹೇಳಿದರು.

ನೂತನ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆಗೊಂಡ ಸಂತ್ರಸ್ತರು ತಮ್ಮ ತೋಟಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆ ಮನೆಗಳಿಗೂ ನಿರಂತರ ಜ್ಯೋತಿ ಮೂಲಕ ವಿದ್ಯುತ್ ಸಂಪರ್ಕ ಅಗತ್ಯವಿದದೆ. ಈ ಬಗ್ಗೆ ಚರ್ಚಿಸಿ ಕ್ರಮವಹಿಸಲಾಗುವುದು,” ಎಂದು ತಿಳಿಸಿದರು.

“ತೋಟದ ಮನೆಗಳಿಗೆ ಸದ್ಯ 7 ಗಂಟೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಉಳಿದಂತೆ ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಸಿಂಗಲ್ ಫೇಸ್ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ,” ಎಂದು ತಿಳಿಸಿದರು.

“ರಾಜ್ಯದಲ್ಲಿ ಕಳೆದ ವರ್ಷದ ಬೇಸಿಗೆಯಲ್ಲಿ ಒಂದು ತಿಂಗಳು ಮಾತ್ರ ವಿದ್ಯುತ್ ಸಮಸ್ಯೆಯಿತ್ತು. ಆದರೂ ಜನರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. ಪಂಜಾಬ್‌ ಹಾಗೂ ಉತ್ತರ ಪ್ರದೇಶಗಳ ಜತೆ ವಿದ್ಯುತ್‌ ವಿನಿಮಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮುಂಬರುವ ಬೇಸಿಗೆಯಲ್ಲೂ ಜನರಿಗೆ ವಿದ್ಯುತ್ ಪೂರೈಸಲು ಇಲಾಖೆ ಸನ್ನದ್ದವಾಗಿದೆ,” ಎಂದರು.

ಸಚಿವರಿಗೆ ಮನವಿ :

ಹುನಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮರೋಳ – ರಾಮಥಾಳ ಏತ ನೀರಾವರಿ, ನಂದವಾಡಗಿ ಏತ ನೀರಾವರಿ ಇರುವದರಿಂದ ಈ ಭಾಗದಲ್ಲಿ 220 ಕೆವಿ ಸಬ್ ಸ್ಟೇಷನ್ ಅಗತ್ಯವಿದೆ. ಇದಕ್ಕೆ ಅನುಮೋದನೆ ದೊರೆತಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ಹಾಗೂ, ಇಳಕಲ್ಲ ನಗರದಲ್ಲಿ 6 ಎಕರೆ ಜಾಗದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಅದರ ಮೇಲೆ ಹಾದುಹೋಗಿರು ಹೈ ಓಲ್ಟೇಜ್ ಲೈನ್‌ ತೆರವುಗೊಳಿಸುವಂತೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರು ಸಚಿವರಲ್ಲಿ ಮನವಿ ಮಾಡಿದರು.

ಸಬ್‌ ಸ್ಟೇಷನ್‌ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸುವುದರ ಜತೆಗೆ ಇತರೆ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಸಚಿವ ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.

ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ” ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯಲ್ಲಿ ಕೈಗಾರಿಕೆಗಳು ಅದರಲ್ಲೂ ವಿಶೇಷವಾಗಿ ಗುಳೇದಗುಡ್ಡ, ಕೆರೂರ ಭಾಗದಲ್ಲಿ ಫವರ್ ಲೂಮ್ ಹೆಚ್ಚಿವೆ. ಹಾಗಾಗಿ ಇಲ್ಲಿ 220 ಕೆ.ವಿ ವಿದ್ಯುತ್‌ ಉಪಕೇಂದ್ರ ಅಗತ್ಯವಿದ್ದು, ಅದಕ್ಕೆ ಅವಶ್ಯವಾಗಿರುವಷ್ಟು ಭೂಮಿಯನ್ನು ನೀಡಲಾಗುವುದು.
ಈ ಭಾಗದ ಬೇಲೂರ, ನಂದಿಕೇಶ್ವರ 33/11 ಕೆ.ವಿಯಿಂದ 110 ಕೆವಿ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಅಲ್ಲದೇ, ಬಾದಾಮಿ ಹಾಗೂ ಗುಳೇದಗುಡ್ಡ ಉಪ ವಿಭಾಗಗಳನ್ನು ಸೇರಿಸಿ ಬಾದಾಮಿಯಲ್ಲಿ ನೂತನ ವಿಭಾಗೀಯ ಕಚೇರಿ ಅಗತ್ಯವಾಗಿದೆ,” ಎಂದು ಮನವಿ ಮಾಡಿದರು.

ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, “ಬೀಳಗಿಯ 220 ಕೆವಿ ಹಾಗೂ 110 ಕೆ.ವಿ ಸುನಗ ವಿದ್ಯುತ್ ವಿತರಣಾ ಕೇಂದ್ರಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೂಡಲೇ ಪೂರ್ಣಗೊಳಿಸಿ ಚಾಲನೆಗೊಳಿಸಲು ಕ್ರಮವಹಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.

ಅಲ್ಲದೇ ಸಿದ್ದಾಪೂರ, ಅರಕೇರಿ, ಚಿಕ್ಕಹಂಚಿನಾಳ ಮತ್ತು ಚಿಕ್ಕಾಲಗುಂಡಿಯಲ್ಲಿ ಹೊಸದಾಗಿ 110 ಕೆವಿ ವಿದ್ಯುತ್ ಕೇಂದ್ರ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ಸಚಿವ ಜಾರ್ಜ್‌ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಎಚ್.ಟಿ. ಹಾಗೂ ಎಲ್‌ಟಿ ಮಾರ್ಗದ ವಾಹನ ಬದಲಾವಣೆ ಕಾಮಗಾರಿಗಳು ಮಂಜೂರಾಗಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಗೊಳ್ಳಬೇಕಿದೆ. ಅಲ್ಲದೇ ಹೆಚ್ಚುವರಿಯಾಗಿ ಪರಿವರ್ತಕಗಳನ್ನು ಸಹ ಅಳವಡಿಸಲು ಬಾಕಿ ಇದ್ದು, ತುರ್ತಾಗಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲು ಇಂಧನ ಸಚಿವರಿಗೆ ತಿಳಿಸಿದರು.

ಈ ಬಗ್ಗೆ ಆದ್ಯತೆ ಮೇರೆಗೆ ಕ್ರಮವಹಿಸಲು ಜಾರ್ಜ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಹೆಸ್ಕಾಂ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಖಾದ್ರಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್, ಕೆಪಿಟಿಸಿಎಲ್‌ನ ವ್ಯವಸ್ಥಾಪಕ‌ ನಿರ್ದೇಶಕರಾದ ಪಂಕಜಕುಮಾರ ಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೋಡ್‌ ಶೆಡ್ಡಿಂಗ್‌ ಇಲ್ಲ :

ಈ ವರ್ಷ ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ. ಕಳೆದ ವರ್ಷ ಬರಗಾಲ ಇದ್ದಾಗಲೇ ಲೊಡ್‌ ಶೆಡ್ಡಿಂಗ್‌ ಮಾಡಿರಲಿಲ್ಲ. ಈ ವರ್ಷ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಚನ್ನಾಗಿದೆ. ಒಂದು ವೇಳೆ ವಿದ್ಯುತ್‌ ಕೊರತೆ ಎದುರಾದರೆ ಬೇರೆ ರಾಜ್ಯಗಳಿಂದ ವಿದ್ಯುತ್‌ ವಿನಿಮಯ ಒಪ್ಪಂದ ಅಥವಾ ಖರೀದಿ ಮಾಡಿ ಸರಬರಾಜು ಮಾಡಲಾಗುವುದು ಎಂದು ಇಂಧನ ಇಲಾಖೆಯ ಸಚಿವ ಕೆ.ಜೆ ಜಾರ್ಜ್‌ ಅವರು ಬುಧವಾರ ಬಾಗಲಕೋಟೆಯ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದರು.


Spread the love

About Laxminews 24x7

Check Also

ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

Spread the love ಬಾಗಲಕೋಟೆ: ಗಣೇಶ ಉತ್ಸವದ ರಜೆಗೆಂದು ಊರಿಗೆ ಬಂದಿದ್ದ ಬೆಂಗಳೂರಿನ ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ