ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಗೊಳಿಸಿದ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಧಾರವಾಡ ಮಹಾನಗರ ಪಾಲಿಕೆ ರಚಿಸಿ ಸರ್ಕಾರಿ ರಾಜ್ಯ ಪತ್ರದಲ್ಲಿ ಮಂಗಳವಾರ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆ/ಸಲಹೆಗೆ 30 ದಿನಗಳ ಕಾಲಾವಕಾಶ ಕೂಡ ನೀಡಿದೆ.
ಹುಬ್ಬಳ್ಳಿ – ಧಾರವಾಡ ಅವಳಿನಗರದ ಜನಸಂಖ್ಯೆ, ಜನಸಾಂದ್ರತೆ, ತೆರಿಗೆ, ತೆರಿಗೇತರ ಸಂಪನ್ಮೂಲ, ವಾರ್ಷಿಕ ತಲಾ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಶೇಕಡಾವಾರು, ಉದ್ಯೋಗ ಪ್ರಮಾಣವನ್ನು ಪರಿಗಣಿಸಿ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಗೊಳಿಸಿ ಪದನಾಮೀಕರಣಗೊಳಿಸಲಾಗಿದೆ. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಇನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆ ಎಂದು ಮುಂದುವರಿಯಲಿದೆ. ಅಂದರೆ ಇಲ್ಲಿ ಧಾರವಾಡ ಮಹಾನಗರ ಪಾಲಿಕೆ ಹೊಸ ಪಾಲಿಕೆ ಎಂದು ಹೆಸರಿಸಿಕೊಳ್ಳಲಿದೆ.
ಲಿಖಿತ ಆಕ್ಷೇಪಣೆಗೆ ಜನವರಿ 30ರವರೆಗೂ ಅವಕಾಶ: ಸರ್ಕಾರ ಅಧಿಕೃತ ಅಧಿಸೂಚನೆಯನ್ನು ಮಂಗಳವಾರ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ. ಈ ಬಗ್ಗೆ ಕಾರಣಸಹಿತವಾದ ಲಿಖಿತ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸಲು ಜ. 21ರಿಂದ 30 ದಿನಗಳವರೆಗೆ ಅವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವವರು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ. ಗೋಪುರ ಬೆಂಗಳೂರು ಇವರಿಗೆ ಸಲ್ಲಿಸಬೇಕು. ಅವಧಿ ಮುಗಿದ ನಂತರ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ರಾಜ್ಯಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಆದೇಶ ಪ್ರತಿ (ETV Bharat)
ಧಾರವಾಡ ಮಹಾನಗರ ಪಾಲಿಕೆಯು 120.94 ಚದರ ಕಿ.ಮೀ ಪ್ರದೇಶ ಹೊಂದಿದ್ದು, ಹುಬ್ಬಳ್ಳಿ ಮಹಾನಗರ ಪಾಲಿಕೆ 127.05 ಚದರ ಕಿ.ಮೀ ಒಟ್ಟು ಪ್ರದೇಶ ಹೊಂದಿದೆ. ಅಂದರೆ ಈಗಿರುವ ಹು-ಧಾ ಮಹಾನಗರ ಪಾಲಿಕೆಯ 82 ವಾರ್ಡ್‌ಗಳ ಪೈಕಿ ಧಾರವಾಡ ಪಾಲಿಕೆ 1ರಿಂದ 26 ವಾರ್ಡ್‌ಗಳನ್ನು ಹಾಗೂ ಹುಬ್ಬಳ್ಳಿ ಮಹಾನಗರ ಪಾಲಿಕೆಯು 27ರಿಂದ 82ರವರೆಗೆ ಅಂದರೆ 56 ವಾರ್ಡ್‌ಗಳ ವ್ಯಾಪ್ತಿ ಹೊಂದಲಿವೆ. ಹುಬ್ಬಳ್ಳಿ ಹಾಗೂ ಧಾರವಾಡ ಸುತ್ತಲಿನ ಗ್ರಾಮೀಣ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೊಳಪಡಿಸುವ ಬಗ್ಗೆ ಅಧಿಸೂಚನೆಯಲ್ಲಿ ಉಲ್ಲೇಖವಿಲ್ಲ.