ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರಿನವರು. ಅಪಘಾತದಲ್ಲಿ ಮೃತಪಟ್ಟ ಹತ್ತೂ ಮಂದಿಯದ್ದು ಒಂದೊಂದು ಕಥೆ. ಒಬ್ಬ ಮನೆಗೆ ಆಧಾರವಾಗಿದ್ದ, ಇನ್ನೊಬ್ಬ ತಂದೆಗೆ ಆಸರೆಯಾಗಲು ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ, ಅದೆಷ್ಟೋ ಕನಸು ಕಂಡಿದ್ದ ಮನೆ ಮಕ್ಕಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ಸವಣೂರಿನಲ್ಲಿ ದುಃಖ ಮಡುಗಟ್ಟಿದೆ.![]()
ಹೌದು, ಅಪಘಾತದಿಂದ ಪ್ರಾಣ ಕಳೆದುಕೊಂಡ ಒಬ್ಬರ ಪತ್ನಿ ಗರ್ಭಿಣಿ, ಮತ್ತೊರ್ವನ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿವೆಯಷ್ಟೇ. ಇನ್ನೊಂದು ಕುಟುಂಬದಲ್ಲಿ ಸಣ್ಣ-ಸಣ್ಣ ಮಕ್ಕಳಿವೆ. ಅವುಗಳನ್ನು ನೋಡಿಕೊಳ್ಳುವರಾರು ಎಂಬ ಚಿಂತೆ. ಇದಕ್ಕಿಂತಲೂ ಘನಘೋರವೆಂದರೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮನೆಯಲ್ಲಂತೂ ಆಕ್ರಂದನವನ್ನ ನೋಡಲಾಗುತ್ತಿಲ್ಲ.
ಎಂದೂ ಕಾಣದ ಸೂತಕ ಛಾಯೆ: ಹಿಂದೆಂದೂ ಕಾಣದ ಸೂತಕದ ಛಾಯೆ ಸವಣೂರು ಪಟ್ಟಣದಲ್ಲಿ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಯ ಮುಂದೆ ಜನಸಾಗರವೇ ಹರಿದು ಬಂದಿದೆ. ಕಳೆದುಕೊಂಡ ನೋವನ್ನು ಅರಗಿಸಿಕೊಳ್ಳಲಾಗದೇ ಮನೆಯೊಳಗೆ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರ ಮನ ಕಲುಕುವಂತಿದೆ.
ಜೀವನೋಪಾಯಕ್ಕೆ ಹಣ್ಣು- ತರಕಾರಿ ಮಾರಿಕೊಂಡಿದ್ದ ಜನ: ಜೀವನೋಪಾಯಕ್ಕೆ ಹಣ್ಣು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದ 10 ಜನರ ದುರ್ಮರಣದಿಂದ ಕುಟುಂಬಗಳ ಆಧಾರಸ್ಥಂಭವೇ ಕಳಚಿ ಬಿದ್ದಿದೆ. ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು, ನೆರವಿಗೆ ಬರುವಂತೆ ಈ ಬಡ ಕುಟುಂಬಗಳು ಮನವಿ ಮಾಡಿಕೊಳ್ಳುತ್ತಿವೆ.
Laxmi News 24×7