ಬಾಗಲಕೋಟೆ (ಮಹಾಲಿಂಗಪುರ): ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಾಲಿಂಗಪುರದ ಯುವಕ ರಮ್‌ಜಾನ್ ಮಲಿಕಸಾಬ ಪೀರಜಾದೆ 50 ಲಕ್ಷ ರೂ. ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ.
ಸತತವಾಗಿ ಮೂರು ಬಾರಿ ಪ್ರಯತ್ನಿಸಿ ಕೊನೆಗೂ ಅಮಿತಾಬ್ ಬಚ್ಚನ್ ಎದುರಿಗೆ ಹಾಟ್ ಶೀಟ್ ಅಲಂಕರಿಸುವ ಸೌಭಾಗ್ಯ ಪಡೆದುಕೊಂಡಿದ್ದ ರಮಜಾನ್ ಹದಿನಾಲ್ಕು ಜಟೀಲ ಪ್ರಶ್ನೆಗಳಿಗೆ ಉತ್ತರಿಸಿ ಒಂದು ಕೋಟಿಯ 15ನೇ ಪ್ರಶ್ನೆಗೆ ಜಾಣ್ಮೆಯ ಕ್ವಿಟ್ ಪಡೆದು 50 ಲಕ್ಷ ರೂ. ಗೆದ್ದಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿದ ರಮ್‌ಜಾನ್ ಅವರ ತಂದೆ ಮಲಿಕ್ ಸಾಬ್ ಗ್ಯಾಸ್ ವೆಲ್ಡರ್ ಆಗಿದ್ದು, ತಾಯಿ ಮುನೇರಾ ತಮ್ಮ ಮನೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ರಮಜಾನ್ ಹೋಟೆಲ್ ಒಂದರಲ್ಲಿ 5 ಗಂಟೆಗಳ ಕಾಲ ಮತ್ತು ಟೆನ್ನಿಸ್ ಕೋರ್ಟ್ ವಾಚಮನ್ ಆಗಿ ಕೆಲಸ ಮಾಡಿ ಓದು ಮುಂದುವರೆಸಿದ್ದು, ಮಹಾಲಿಂಗಪುರ ಎಸ್‌ಸಿಪಿ ಸಂಸ್ಥೆಯ ಕೆಎಲ್‌ಇ ಕಾಲೇಜಿನಲ್ಲಿ ಬಿಎ ಪದವಿಯನ್ನು ಪೂರೈಸಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ನಡೆಸುತ್ತಿದ್ದಾರೆ.
ಈಗಾಗಲೇ ಸರಣಿ ಪ್ರಸಾರಕ್ಕಾಗಿ ಯುವಕನ ಮನೆ, ಶಾಲೆ, ಕಾಲೇಜು ಸೇರಿದಂತೆ ಮಹಾಲಿಂಗಪುರದ ಹಲವು ಸ್ಥಳಗಳ ಚಿತ್ರೀಕರಣ ಕಾರ್ಯ ಮುಗಿದಿದ್ದು, ಜನವರಿ 13ರಂದು ಸೋಮವಾರ ರಾತ್ರಿ ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ಹಿರಿಯ ನಟ ಅಮಿತಾಭ ಬಚ್ಚನ್ ಅವರು ರಮಜಾನ್‌ಗೆ ಶುಭ ಹಾರೈಸಿ ಕೆಬಿಸಿ ನೀಡಿರುವ ಈ ಹಣವನ್ನು ಸುಭದ್ರ ಬದುಕು ಕಟ್ಟಿಕೊಳ್ಳಲು ವಿನಿಯೋಗಿಸುವಂತೆ ಸಲಹೆ ನೀಡಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಗೆದ್ದು ಬಂದ ರಮಜಾನ್ ಅವರನ್ನು ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಹಾರ ಹಾಕಿ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ.
Laxmi News 24×7