ಬೆಂಗಳೂರು, ಜನವರಿ 10: ಅವರೆಲ್ಲ ಕೋವಿಡ್ ಸಮಯದಲ್ಲಿ ಟೊಂಕಕಟ್ಟಿ ದುಡಿದವರು. ಇಡೀ ದೇಶವೇ ಲಾಕ್ ಡೌನ್ನಲ್ಲಿ ಸ್ತಬ್ಧವಾಗಿದ್ದಾಗ ಜೀವದ ಹಂಗು ತೊರೆದು ಫೀಲ್ಡ್ಗಿಳಿದು ದುಡಿದವರು. ಆದರೆ ಇದೀಗ ಸರ್ಕಾರದ ಭರವಸೆಗಳು ಬರೀ ಮಾತಾಗಿ ಉಳಿದಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ಹಾದಿ ಹಿಡಿದಿದ್ದರು. ಇತ್ತ ಆಶಾ ಕಾರ್ಯಕರ್ತೆಯರ (ASHA workers) ಪ್ರತಿಭಟನೆ ಬಗ್ಗೆ ಹಲವು ಭಾರೀ ಸಂಧಾನ ನಡೆಸಿ ಸುಸ್ತಾಗಿದ್ದ ಸರ್ಕಾರ, ಇದೀಗ ಆಶಾಕಾರ್ಯಕರ್ತೆಯರ ಮನವೊಲಿಸುವುದರಲ್ಲಿ ಕೊನೆಗೂ ಸಕ್ಸಸ್ ಆಗಿದೆ. ಇತ್ತ ಮೈಕೊರೆವ ಚಳಿ ಮಧ್ಯೆ ಪ್ರತಿಭಟಿಸಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ನಾಲ್ಕು ದಿನದ ಪ್ರತಿಭಟನೆಗೆ ಕೊನೆಗೂ ಸಿಕ್ಕ ಜಯ
ಪ್ರತಿ ಗ್ರಾಮ, ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ತಲುಪಿಸುವ ಕೆಲಸ ಮಾಡ್ತಿದ್ದ ಆಶಾಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಮೈ ಕೊರೆವ ಚಳಿಯಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಆಶಾ ಕಾರ್ಯಕರ್ತೆಯರು ಸತತ ನಾಲ್ಕು ದಿನಗಳಿಂದ ಸಮಸ್ಯೆಗಳನ್ನ ಲೆಕ್ಕಿಸದೇ ಹೋರಾಟ ಮುಂದುವರಿಸಿದ್ದರು. ಸದ್ಯ ಇಷ್ಟು ದಿನ ಸಂಧಾನ ಮಾಡಿ ವಿಫಲವಾಗಿದ್ದ ಸರ್ಕಾರ, ಇದೀಗ ಕೊನೆಗೂ ಆಶಾ ಕಾರ್ಯಕರ್ತೆಯರ ಮನವೊಲಿಸೋದರಲ್ಲಿ ಸಕ್ಸಸ್ ಆಗಿದೆ. ಸದ್ಯ ಆಶಾಕಾರ್ಯಕರ್ತೆಯರ ಬೇಡಿಕೆಗಳಲ್ಲಿ ಒಂದಾಗಿದ್ದ ಗೌರವಧನ ಹೆಚ್ಚಳಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, 15 ಸಾವಿರ ರೂ. ಏರಿಕೆಗೆ ಇದ್ದ ಡಿಮ್ಯಾಂಡ್ನಲ್ಲಿ ಸದ್ಯ 10 ಸಾವಿರ ರೂ. ಕೊಡುವುದಕ್ಕೆ ಸರ್ಕಾರ ಓಕೆ ಅಂದಿರೋದು ಆಶಾಕಾರ್ಯಕರ್ತೆಯರಿಗೆ ಜಯ ಸಿಕ್ಕಂತಾಗಿದೆ.
Laxmi News 24×7