ಬೆಳಗಾವಿ: ”ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಪಂಚನಾಮೆ ಮಾಡಬೇಕೆಂದರೆ, ಅದು ಯಾವ ರೀತಿಯಲ್ಲಿ ಎನ್ನುವುದನ್ನು ಸಿಐಡಿ ಹೇಳಲಿ. ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ” ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಸುವರ್ಣ ವಿಧಾನಸೌಧದ ವಿಧಾನ ಪರಿಷತ್ ಮೊಗಸಾಲೆಯಲ್ಲಿ ಸಿಐಡಿ ತನಿಖೆಗೆ ಸ್ಥಳ ಮಹಜರಿಗೆ ಅನುಮತಿ ಕೊಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ”ಯಾವ ರೀತಿ ಸ್ಥಳ ಮಹಜರು ಮಾಡಲಾಗುತ್ತದೆ ಎಂಬುದನ್ನು ಸಿಐಡಿಯವರು ಹೇಳಬೇಕು. ಅಲ್ಲೇನು ಕುರ್ಚಿ ಅಥವಾ ಟೇಬಲ್ ಇರುವ ಸ್ಥಳ ಮಹಜರು ಮಾಡುತ್ತಾರೋ? ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಾಡುತ್ತಾರೋ? ಎನ್ನುವುದನ್ನು ತಿಳಿಸಬೇಕು. ಅಲ್ಲದೇ, ಸದನವನ್ನು ಮುಂದೂಡಲಾಗಿದೆ.
ಸದನದೊಳಗೆ ಬಡಿದಾಟ, ಹೊಡೆದಾಟ ಆಗಿಲ್ಲ. ಅನುಮತಿ ಕೊಡಬೇಕೋ, ಕೊಡಬಾರದೋ ಎನ್ನುವುದನ್ನು ಈಗ ಹೇಳಲು ಆಗುವುದಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇನೆ” ಎಂದು ಹೇಳಿದರು.
ವಿಡಿಯೋ ಸಾಕ್ಷಿ ಕೊಡಿ ಎಂದು ಸಿಐಡಿ ಪತ್ರ ಬರೆದ ಕುರಿತ ಮಾಧ್ಯಮಗಳ ಪ್ರಶ್ನೆಗೆ, ”ನಿನ್ನೆ ವಿಡಿಯೋ ಸಾಕ್ಷಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿದ್ದಾರೆ. ಮೊದಲು ಸಿ.ಟಿ.ರವಿ ಕೊಟ್ಟಿದ್ದರು. ರವಿಯವರು ಕೊಟ್ಟಾಗ ಒಂದು ಸೈಡ್ ಆಗಿತ್ತು. ಈಗ ಎರಡು ಕಡೆಯಿಂದ ವಿಡಿಯೋ ಬಂದಿವೆ. ನಮ್ಮ ಕಾರ್ಯದರ್ಶಿ ಜೊತೆಗೆ ನಮ್ಮದೇ ತಂಡಕ್ಕೆ ವಿಡಿಯೋ ಕೊಟ್ಟಿದ್ದೇನೆ. ನಾಳೆ ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ನೋಡಿ ಎಫ್ಎಸ್ಎಲ್ಗೆ ಕಳುಹಿಸುತ್ತೇವೆ. ವರದಿ ಬಂದ ಬಳಿಕ ಸತ್ಯಾಂಶ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಬಸವರಾಜ ಹೊರಟ್ಟಿ ಹೇಳಿದರು.
Laxmi News 24×7