ಬೆಂಗಳೂರು: ಕೊಳವೆ ಬಾವಿ ಕೊರೆಯುವ ಹಾಗೂ ನೀರು ಸಂಸ್ಕರಣಾ ಘಟಕಗಳ (ಆರ್.ಒ) ಸ್ಥಾಪನೆಯಲ್ಲಿ ಹಣಕಾಸು ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಹಡ್ಸನ್ ವೃತ್ತದ ಬಳಿಯಿರುವ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ಚೀಫ್ ಇಂಜಿನಿಯರ್ ಕಚೇರಿಯ ಮೇಲೆ ಬೆಳಗ್ಗೆ 11 ಗಂಟೆಗೆ 7 ಜನರಿದ್ದ ಅಧಿಕಾರಿಗಳ ತಂಡ ದಾಳಿ ನಡೆಸಿ, ದಾಖಲಾತಿ ಪರಿಶೀಲನೆ ಮಾಡುತ್ತಿದೆ.
ಪ್ರಕರಣದ ಹಿನ್ನೆಲೆ: ನಗರದಲ್ಲಿ 969 ಕೋಟಿ ರೂ. ವೆಚ್ಚದಲ್ಲಿ 9,588 ಕೊಳವೆಬಾವಿ ಹಾಗೂ 976 ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಇದರಲ್ಲಿ 400 ಕೋಟಿಯಷ್ಟು ಬೃಹತ್ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಆರ್.ಟಿ.ಐ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡ ಎನ್.ಆರ್. ರಮೇಶ್, 2019ರಲ್ಲಿ ದಾಖಲೆಗಳ ಸಮೇತ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿದ್ದರು. ಅದರನ್ವಯ 2016 ರಿಂದ 2018ರ ವರೆಗಿನ ಆಯುಕ್ತರು, 5 ಜನ ಜಂಟಿ ಆಯುಕ್ತರು, 5 ಜನ ಮುಖ್ಯ ಇಂಜಿನಿಯರ್‌ಗಳು ಸೇರಿದಂತೆ 40ಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. ಎಸಿಬಿ ರದ್ದಾದ ಬಳಿಕ ಪ್ರಕರಣದ ತನಿಖೆಯನ್ನು ಇಡಿಗೆ ವಹಿಸಲಾಗಿತ್ತು.