ಹಾವೇರಿ: ಹಾವೇರಿ ಕೇಂದ್ರ ಬಸ್ ನಿಲ್ದಾಣದ ಪ್ರವೇಶದ್ವಾರದಲ್ಲಿ ರಸ್ತೆ ದಾಟುತ್ತಿದ್ದ ರೈತ ಕರಿಯಪ್ಪ ಮುಚ್ಚಿಕೊಪ್ಪನವರ ಕಾಲಿನ ಮೇಲೆ ಬಸ್ ಹರಿದು ಅಪಘಾತ ಸಂಭವಿಸಿದ್ದು, ಚಾಲಕನ ನಿರ್ಲಕ್ಷ್ಯ ಎಂದು ಆರೋಪಿಸಿದ ಸ್ಥಳೀಯರು, ವಾಹನ ಸಂಚಾರ ತಡೆದು ರಸ್ತೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
‘ಕನಕಾಪುರದ ರೈತ ಕರಿಯಪ್ಪ ಅವರು ಕೆಲಸ ನಿಮಿತ್ತ ಹಾವೇರಿಗೆ ಬಂದಿದ್ದರು. ಕೆಲಸ ಮುಗಿಸಿಕೊಂಡು ಊರಿಗೆ ಹೋಗಲೆಂದು ಹಾನಗಲ್ ರಸ್ತೆಯ ಮೂಲಕ ಬಸ್ ನಿಲ್ದಾಣದೊಳಗೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಅತೀ ವೇಗವಾಗಿ ಬಂದ ಬಸ್, ಕರಿಯಪ್ಪ ಅವರಿಗೆ ಡಿಕ್ಕಿ ಹೊಡೆದಿತ್ತು. ಅವರ ಎರಡೂ ಕಾಲುಗಳ ಮೇಲೆಯೇ ಬಸ್ಸಿನ ಮುಂಬದಿ ಚಕ್ರಗಳು ಹರಿದವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
‘ನರಗುಂದದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸಿನ ಚಾಲಕ ಮಲ್ಲಿಕಸಾಬ್, ನಿರ್ಲಕ್ಷ್ಯ ಹಾಗೂ ಅತೀ ವೇಗದಲ್ಲಿ ಬಸ್ ಚಲಾಯಿಸಿದ್ದ. ಅಪಘಾತದ ಬಳಿಕ ರೈತ ಕರಿಯಪ್ಪ, ರಸ್ತೆಯಲ್ಲಿಯೇ ನರಳುತ್ತ ಬಿದ್ದಿದ್ದರು. ಅವರ ಎರಡೂ ಕಾಲುಗಳು ತುಂಡರಿಸಿ ರಕ್ತ ಸೋರುತ್ತಿತ್ತು. ಚಾಲಕ, ಅವರ ನೆರವಿಗೂ ಹೋಗಿರಲಿಲ್ಲ’ ಎಂದು ತಿಳಿಸಿದರು.
‘ಬಸ್‌ನಿಂದ ಇಳಿದಿದ್ದ ಚಾಲಕ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಸ್ಥಳೀಯರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂಬುಲೆನ್ಸ್‌ಗೆ ಕರೆ ಮಾಡಿದ್ದ ಸ್ಥಳೀಯರು, ಕರಿಯಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದರು’ ಎಂದು ಹೇಳಿದರು.
ಕರಿಯಪ್ಪ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಸ್ಪತ್ರೆ ವೈದ್ಯರು, ‘ಅವರ ಎರಡೂ ಕಾಲುಗಳು ತುಂಡರಿಸಿ, ಎಲುಬುಗಳು ನಜ್ಜುಗುಜ್ಜಾಗಿವೆ. ತೀವ್ರ ರಕ್ತಸ್ರಾವವಾಗಿ, ಆರೋಗ್ಯದಲ್ಲೂ ಏರುಪೇರಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕೆಎಂಸಿ-ಆರ್‌ಐಗೆ ಕಳುಹಿಸಲಾಗಿದೆ’ ಎಂದರು.
ಸಂಚಾರ ತಡೆದು ಸ್ಥಳೀಯರ ಆಕ್ರೋಶ
‘ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಬಸ್ ನಿಲ್ದಾಣ ಬಳಿ ಪದೇ ಪದೇ ಅಪಘಾತಗಳು ಉಂಟಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Laxmi News 24×7