ಚನ್ನಮ್ಮನ ಕಿತ್ತೂರು: ಖ್ಯಾತ ತಬಲಾ ವಾದಕರಾಗಿದ್ದ ಎಲ್ಲಪ್ಪ ಭಜಂತ್ರಿ ಅವರ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಂಡಿತ ಅಶೋಕ ಹುಗ್ಗಣ್ಣವರ ಪ್ರಸ್ತುತ ಪಡಿಸಿದ ಶಾಸ್ತ್ರೀಯ ಗಾಯನ ಶ್ರೋತೃಗಳ ಮನಗೆದ್ದಿತು.
ರಾಗ ಮಾಲಕೌಂಸದೊಂದಿಗೆ ಗಾಯನ ಆರಂಭಿಸಿದರು.
ಗಾಯನಕ್ಕೆ ಮನಸೋತ ಪ್ರೇಕ್ಷಕರು ಮಧ್ಯೆದಲ್ಲಿ ಚಪ್ಪಾಳೆ ತಟ್ಟಿ ಸಂಭ್ರಮಪಟ್ಟರು. ಭೈರವಿ ರಾಗದಲ್ಲಿ ‘ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ’ ಗೀತೆ ಪ್ರಸ್ತುತ ಪಡಿಸಿ ಕೊನೆಗೊಳಿಸಿದರು.
ಪಂ.ವಸಂತ ಭಜಂತ್ರಿ ಟ್ರಂಪೆಟ್ ನುಡಿಸಿ ರಂಜಿಸಿದರು. ಪಂಡಿತ ಅಲ್ಲಮಪ್ರಭು ಕಡಕೋಳ ತಬಲಾ ಮತ್ತು ಪರಶುರಾಮ್ ಕಟ್ಟಿಸಂಗಾವಿ ಹಾರ್ಮೋನಿಯಂ ಸಾಥ್ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನೇತ್ರ ತಜ್ಞ ಎಂ.ಎಸ್.ಹೊತ್ತಿಗಿಮಠ ಮಾತನಾಡಿ, ‘ಹೆಚ್ಚುತ್ತಿರುವ ಕಾಯಿಲೆಗಳಿಗೆ ಆಧ್ಯಾತ್ಮ ಮತ್ತು ಸಂಗೀತ ಒಳ್ಳೆಯ ಔಷಧವಾಗಿದೆ. ಶಾಲೆಗಳಲ್ಲಿ ನಿಂತು ಹೋಗಿರುವ ಸಂಗೀತ ಅಭ್ಯಾಸವನ್ನು ಮಕ್ಕಳಿಗೆ ಮತ್ತೆ ಪುನರಾರಂಭಿಸಬೇಕು’ ಎಂದರು.
ಪಂಡಿತ ಹುಗ್ಗಣ್ಣವರ ಮಾತನಾಡಿ, ‘ಕಿತ್ತೂರಿನ ಜತೆ ನನ್ನದು ಹಳೆ ನಂಟು. ಹಿಂದೆ ಇಲ್ಲಿಗೆ ಬಂದು ಅನೇಕ ಸಂಗೀತ ಕಾರ್ಯಕ್ರಮ ಕೊಟ್ಟಿದ್ದೇನೆ. ಸಂಗೀತದಲ್ಲಿ ರಸಾಯನ ಮತ್ತು ಭೌತಶಾಸ್ತ್ರವಿದೆ. ನಾವು ಜನ್ಮ ತಾಳುವಾಗಲೇ ಸಂಗೀತ ಬಂದಿದೆ. ಅದನ್ನು ನಾವು ಅವಲೋಕನ ಮಾಡಿರುವುದಿಲ್ಲ’ ಎಂದು ಉದಾಹರಣೆ ಸಹಿತ ವಿವರಿಸಿದರು.
ಶಕುಂತಲಾ ಗಡಿಗಿ ಗ್ರಾಮೀಣ ಆಸ್ಪತ್ರೆಯ ವೈದ್ಯ ಚಂದ್ರಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಗರಂಜಿನಿ ಸಂಗೀತ ಸಂಘದ ಅಧ್ಯಕ್ಷ ಪ್ರಲ್ಹಾದ ಶಿಗ್ಗಾಂವಿ, ಪದಾಧಿಕಾರಿಗಳಾದ ಈಶ್ವರ ಗಡಿಬಿಡಿ, ಸಂದೀಪ ದೇಶಪಾಂಡೆ, ರಾಜೇಂದ್ರ ಕುಲಕರ್ಣಿ, ಜಗದೀಶ ರಾಚೋಟಿಮಠ, ರುದ್ರಪ್ಪ ಎಲಿಗಾರ, ಹೊಸ ಪ್ರೌಢಶಾಲೆ ಶಿಕ್ಷಕ ಸಿಬ್ಬಂದಿ, ಭಜಂತ್ರಿ ಪರಿವಾರದವರು, ನಾಗರಿಕರು ಇದ್ದರು.
Laxmi News 24×7