ರಾಯಚೂರು: ಮಳೆಗಾಲ ಮುಗಿದು ಚಳಿಗಾಲ ಪ್ರವೇಶ ಮಾಡಿದೆ. ಬಿಸಿಲ ಧಗೆ ಮುಂದುವರಿದರೂ ರಾತ್ರಿ ಸ್ವಲ್ಪ ಮಟ್ಟಿಗೆ ಸೆಕೆ ಕಡಿಮೆ ಇದೆ. ತರಕಾರಿ ಬೆಲೆಗಳಲ್ಲೂ ಏಳಿತವಾಗಿದೆ. ರಾಯಚೂರಿಗೆ ಹೊರ ಜಿಲ್ಲೆಗಳಿಂದ ತರಕಾರಿ ಬರುವುದು ಮುಂದುವರಿದೆ.
ಬೆಳ್ಳುಳ್ಳಿ ಬೆಲೆ ಪ್ರತಿ ಕೆಜಿಗೆ ₹400 ತಲುಪಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.
ಗಜ್ಜರಿ, ಬೀಟ್‌ರೂಟ್, ತೊಂಡೆಕಾಯಿ, ಹಿರೇಕಾಯಿ ₹ 2 ಸಾವಿರ, ಡೊಣಮೆಣಸಿನಕಾಯಿ ₹1 ಸಾವಿರ, ನುಗ್ಗೆಕಾಯಿ ₹8 ಸಾವಿರ ಹೆಚ್ಚಾಗಿದೆ. ಆಲೂಗಡ್ಡೆ, ಮೆಣಸಿನಕಾಯಿ ಹಾಗೂ ಚವಳೆಕಾಯಿ ಬೆಲೆ ಸ್ಥಿರವಾಗಿದೆ.
ಪ್ರತಿ ಕ್ವಿಂಟಲ್‌ಗೆ ಈರುಳ್ಳಿ, ಎಲೆಕೋಸು, ಹೂಕೋಸು, ಟೊಮೆಟೊ ₹ 1 ಸಾವಿರ, ಬೆಂಡೆಕಾಯಿ ₹ 3 ಸಾವಿರ, ಬದನೆಕಾಯಿ, ಸೌತೆಕಾಯಿ ₹ 4 ಸಾವಿರ ಹಾಗೂ ಬೀನ್ಸ್ ಬೆಲೆ ಅರ್ಧದಷ್ಟು ಇಳಿದಿದೆ. ಸಬ್ಬಸಗಿ, ಕರಿಬೇವು, ಮೆಂತೆ, ಕೊತಂಬರಿ, ಪಾಲಕ ಸೊಪ್ಪು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯ ಇವೆ.
ನೆರೆಯ ಜಿಲ್ಲೆಗಳಿಂದ ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊಪ್ಪು ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
ಜಿಲ್ಲೆಯ ರೈತರು ವಾರ್ಷಿಕ ಬೆಳೆಗೆ ಹೆಚ್ಚಿನ ಒತ್ತುಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯುವ ತರಕಾರಿ ಸ್ಥಳೀಯ ಮಾರುಕಟ್ಟೆಗೆ ಸಾಲುತ್ತಿಲ್ಲ.
‘ಬೆಳಗಾವಿ, ಹೈದರಾಬಾದ್ ಹಾಗೂ ಆಂಧ್ರಪ್ರದೇಶದ ಜಿಲ್ಲೆಗಳಿಂದ ತರಕಾರಿ ಬಂದಿದೆ. ಬೆಳ್ಳುಳ್ಳಿ ಬಿಟ್ಟರೆ ಉಳಿದ ತರಕಾರಿ ಗ್ರಾಹಕರ ಕೈಗೆಟುವ ಬೆಲೆಯಲ್ಲಿ ದೊರೆಯುತ್ತಿದೆ ‘ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.