ಸಾಮಾನ್ಯವಾಗಿ ಯಾವುದೋ ಅನಾಮಧೇಯ ಕರೆ ಮಾಡಿ, ಹೊಸ ನಂಬರ್ ನಿಂದ ಕರೆ ಮಾಡಿ ಬೆದರಿಕೆ ಹಾಕಿರುವ ಪ್ರಕರಣಗಳನ್ನು ಕೇಳಿದ್ದೇವೆ. ಹೊಸ ತಂತ್ರಜ್ಞಾನ ಬಳಸಿ ಧ್ವನಿ ಬದಲಾಯಿಸಿ ಮಾತನಾಡುವುದು ಕೂಡ ನೋಡಿದ್ದೇವೆ. ಆದರೆ ಮೈಸೂರಿನಲ್ಲೊಬ್ಬ ಕಿರಾತಕ, ಪೊಲೀಸ್ ಕಮಿಷನರ್ ಮೊಬೈಲ್ ಸಂಖ್ಯೆಯನ್ನೇ ಬಳಸಿ ನಕಲಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.
ಈ ವಿಚಾರ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತವಾದ ಪೊಲೀಸರು, ಕಿರಾತಕನ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.
ನಾಗರಿಕರ ರಕ್ಷಣೆಗೆ ತಾವು ಸದಾ ಸಿದ್ಧ ಎಂದು ಪೊಲೀಸರು ಹೇಳುತ್ತಾರೆ. ಅಪರಾಧ ನಡೆಯದಂತೆ ತಡೆಯುವುದು, ನಡೆದಾಗ ಅಪರಾಧಿಗಳನ್ನು ಪತ್ತೆಹಚ್ಚುವ ಮೂಲಕ ನ್ಯಾಯ ಒದಗಿಸಿಕೊಡುತ್ತಾರೆ. ಆದರೆ ಈ ಭೂಪ ಆಯಪ್‌ವೊಂದರ ಸಹಾಯದಿಂದ ಮೈಸೂರು ನಗರ ಪೊಲೀಸ್ ಆಯುಕ್ತರ ಅಧಿಕೃತ ಮೊಬೈಲ್ ಸಂಖ್ಯೆ ಬಳಸಿ, ನಕಲಿ ಕರೆ ಮಾಡಿ ಬೆದರಿಕೆ ಹಾಕಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಘಟನೆ?
ಮೈಸೂರು ನಗರದ ಬನ್ನಿಮಂಟಪದ ನಿವಾಸಿ ಸಮೀರ್ ಹುಸೇನ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಮೊಹಮ್ಮದ್ ಸೈಫ್ ವಿರುದ್ಧ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತ ನಗರ ಪೊಲೀಸ್ ಆಯುಕ್ತರ ಅಧಿಕೃತ ಮೊಬೈಲ್ ಸಂಖ್ಯೆಯನ್ನು ಕಾನೂನು ಬಾಹಿರ ತಂತ್ರಜ್ಞಾನ ಬಳಸಿ ಕಾಲ್ ಮರ್ಜ್ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಮ್ಮದ್ ಸೈಫ್ ವ್ಯಕ್ತಿಯೊಬ್ಬರಿಗೆ ಕಾರು ಕೊಡಿಸುತ್ತೇನೆ ಎಂದು 5 ಲಕ್ಷ ರೂಪಾಯಿ ಪಡೆದಿದ್ದ. ಆದರೆ, ಕಾರು ಕೊಡದೆ ಸತಾಯಿಸುತ್ತಿದ್ದ. ಬಳಿಕ ಆಯಪ್‌ವೊಂದನ್ನು ಡೌನ್‌ಲೋಡ್ ಮಾಡಿದ್ದು ಈ ಆಯಪ್ ಅನ್ಯರಿಗೆ ಕರೆ ಮಾಡುವಾಗ ಯಾವ ನಂಬರ್ ಕಾಣುವಂತೆ ಮಾಡಬೇಕು ಎಂದು ನಮೂದಿಸಲಾಗುತ್ತದೋ ಅಂತಹ ನಂಬರ್ ಪರದೆ ಮೇಲೆ ಬರುವಂತೆ ಮಾಡಲು ಅವಕಾಶವಿದ್ದು, ಈ ತಂತ್ರಜ್ಞಾವನ್ನೇ ಬಳಸಿಕೊಂಡು ಕರೆ ಮಾಡಿ ಬೆದರಿಕೆ ಹಾಕಿದ್ದು ಇದೀಗ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ.
ತಂತ್ರಜ್ಞಾನ ಬಳಸಿ ಬೆದರಿಕೆ
ಮೊಬೈಲ್‌ನಲ್ಲಿ ನಕಲಿ ನಂಬರ್ ಬಳಸಿ ಕರೆ ಮಾಡಲು ಸಾಕಷ್ಟು ಅಪ್ಲಿಕೇಷನ್‌ಗಳಿದ್ದು, ಇದನ್ನು ಬಳಸಿಕೊಂಡು ಆರೋಪಿ ಕರೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಆಯಪ್‌ನಿಂದ ಅನ್ಯರಿಗೆ ಕರೆ ಮಾಡುವಾಗ ಯಾವ ನಂಬರ್ ಕಾಣಿಸಬೇಕು ಎನ್ನುವುದನ್ನು ನಮೂದಿಸಿದರೆ ಅದೇ ನಂಬರ್ ನಾವು ಕರೆ ಮಾಡುವ ಮೊಬೈಲ್‌ನಲ್ಲಿ ಕಾಣಿಸುತ್ತದೆ ಎಂದು ಹೇಳಲಾಗಿದೆ. ಇದನ್ನೇ ಆರೋಪಿ ಬಳಸಿಕೊಂಡು ಬೆದರಿಕೆ ಹಾಕಿದ್ದನೆ ಎಂದು ಪೊಲೀಸರು ತಿಳಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.