ಚಿಕ್ಕೋಡಿ: ‘ಭಾರತ ದೇಶವನ್ನು ಧಾರ್ಮಿಕ, ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಕಟ್ಟಲಾಗಿದೆ. ಯುವಕರು ಸಂಸ್ಕಾರವಂತರಾಗಿ ದೇಶದ ಪರಂಪರೆ ಮುಂದುವರಿಸಬೇಕು’ ಎಂದು ಜಮಖಂಡಿಯ ಸಹಜಾನಂದ ಅವಧೂತರು ಹೇಳಿದರು.
ತಾಲ್ಲೂಕಿನ ಅಂಕಲಿ ಗ್ರಾಮದ ರುದ್ರಾವಧೂತ ಮಠದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಂಸ್ಕಾರದ ಕೊರತೆಯಿಂದ ಯುವಕರು ದಾರಿ ತಪ್ಪಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.
ಇವುಗಳಿಂದ ಮುಕ್ತರಾಗಬೇಕು. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಧಾರ್ಮಿಕ ಚಿಂತನೆಗಳು ಯುವಕರನ್ನು ಸನ್ಮಾರ್ಗದತ್ತ ಕರೆದುಕೊಂಡು ಹೋಗಲು ಸಾಧ್ಯ’ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೋಳಿಗುಡ್ಡದ ಸಿದ್ಧಾರೂಢ ಸ್ವಾಮೀಜಿ, ಲಿಂಗನೂರಿನ ಸ್ವಾಮೀಜಿ, ಜಮಖಂಡಿಯ ಕೃಷ್ಣಾನಂದ ಅವಧೂತರು ಮಾತನಾಡಿದರು. ಪ್ರಮುಖರಾದ ಈರಪ್ಪ ಮಾಳಗೆ, ತುಕಾರಾಂ ಕುರಣೆ, ಅನಿಲ ಬಡಿಗೇರ, ಸುಕುಮಾರ ಚಲವಾದಿ, ಪಿಂಟು ಮಾಳಗೆ, ರಾಕೇಶ ತಳಕೇರಿ ಇದ್ದರು.