ನಮ್ಮ ಉತ್ಪನ್ನ ನಮ್ಮ ಅಭಿಮಾನ ಎಂಬ ಘೋಷವಾಕ್ಯದೊಂದಿಗೆ ಇಂದಿನಿಂದ ದೇಶಾದ್ಯಂತ ಆರಂಭವಾಗಿರುವ ಚೀನಿ ಉತ್ಪನ್ನ ಬಹಿಷ್ಕಾರ ಜನಾಂದೋಲನಕ್ಕೆ ಹಾಲಿವುಡ್ ನಟ-ನಟಿಯರು, ವಿವಿಧ ಕ್ಷೇತ್ರಗಳ ಖ್ಯಾತನಾಮರು, ರಾಜಕೀಯ ಮುಖಂಡರು, ಉದ್ಯಮಿಗಳು, ಅಸಂಖ್ಯಾತ ಸಂಘ-ಸಂಸ್ಥೆಗಳು, ಕ್ರೀಡಾಪಟುಗಳು ಸಹ ಕೈ ಜೋಡಿಸಿದ್ದು, ಭಾರೀ ಬೆಂಬಲ ವ್ಯಕ್ತವಾಗಿದೆ.
ಇದೇ ವೇಳೆ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಚೀನಾಗೆ ಮತ್ತೊಂದು ಶಾಕ್ ನೀಡಿದೆ. 4ಜಿ ಮೇಲ್ದರ್ಜೆಗಾಗಿ ಯಾವುದೇ ಕಾರಣಕ್ಕೂ ಚೀನಾದ ಉಪಕರಣಗಳನ್ನು ಬಳಸದಂತೆ ದೂರ ಸಂಪರ್ಕ ಸಚಿವಾಲಯ (ಡಿಒಟಿ) ಭಾರತ್ ಸಂಚಾರ್ ನಿಗಮ-ನಿಯಮಿತ (ಬಿಎಸ್‍ಎನ್‍ಎಲ್)ಕ್ಕೆ ಸ್ಪಷ್ಟ ಸೂಚನೆ ನೀಡಿದೆ.
4ಜಿ ಮೇಲ್ದರ್ಜೆಗಾಗಿ ಚೀನಿ ಉಪಕರಣಗಳನ್ನು ಬೆಳೆಸುವುದನ್ನು ನಿಲ್ಲಿಸಿದರೆ ಬೀಜಿಂಗ್‍ಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಲಿದ್ದು, ಆ ದೇಶದ ದೂರ ಸಂಪರ್ಕ ವಲಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಈ ಸಂಬಂಧ ದೂರ ಸಂಪರ್ಕ ಇಲಾಖೆ ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್‍ಎಲ್‍ಗೆ ಸೂಚನೆ ನೀಡಿದ್ದು, ಇಂದು ಬೆಳಗ್ಗೆಯಿಂದಲೇ ಚೀನಾ ಉಪಕರಣಗಳು ಸಂಪೂರ್ಣ ಬಂದ್ ಆಗಿವೆ.
ರಾಜಧಾನಿ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಇಂದು ಬೆಳಗ್ಗೆಯಿಂದಲೇ ನಾಗರಿಕರು ಚೀನಾ ದೌರ್ಜನ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಚೀನಾ ಧ್ವಜ ಮತ್ತು ಉತ್ಪನ್ನಗಳನ್ನು ಸುಟ್ಟುಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಜನರು ಇಂದು ಚೀನಾ ಉತ್ಪನ್ನಗಳು ಮತ್ತು ಅಲ್ಲಿನ ಕಳಪೆ ವಸ್ತುಗಳನ್ನು ಬೀದಿಗೆಸೆದು ಬೆಂಕಿ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು.
ನವದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲೂ ಚೀನಿ ವಿರುದ್ಧ ಆರಂಭವಾಗಿರುವ ಚಳವಳಿ ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ.
# ಚೀನಿ ಉತ್ಪನ್ನ ಆಮದಿಗೆ ಕೊಕ್ಕೆ:
ಚೀನಿ ಸೈನಿಕರ ಹಿಂಸಾಕೃತ್ಯದ ವಿರುದ್ಧ ಉದ್ದಿಮೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀಜಿಂಗ್‍ಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಲು ದೊಡ್ಡ ಕಾರ್ಯತಂತ್ರ ರೂಪಿಸಿದ್ದಾರೆ.
ಅಖಿಲ ಭಾರತ ಉದ್ದಿಮೆದಾರರ ಸಂಘವು ಇಂದು ಬೆಳಗ್ಗೆ ವಿವಿಧ ಕ್ಷೇತ್ರಗಳ ಸೆಲಬ್ರಿಟಿಗಳು ಮತ್ತು ಉದ್ದಿಮೆದಾರರಿಗೆ ಕರೆ ನೀಡಿ ಸ್ವದೇಶಿ ವಸ್ತುಗಳಿಗೆ ಉತ್ತೇಜನ, ಚೀನಿ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಲು ಮನವಿ ಮಾಡಿದೆ.
ಕೆಲವೇ ತಿಂಗಳೊಳಗೆ ಒಂದು ಲಕ್ಷ ಕೋಟಿ ರೂ. ಮೊತ್ತದ ಚೀನಿ ಉತ್ಪನ್ನಗಳ ಆಮದು ತಡೆ ಗುರಿಯೊಂದಿಗೆ ನಮ್ಮ ಉತ್ಪನ್ನ-ನಮ್ಮ ಅಭಿಯಾನ ಆಂದೋಲನ ಆರಂಭವಾಗಿದೆ. ಬಾಲಿವುಡ್ ಸೆಲಬ್ರಿಟಿಗಳು, ಕ್ರೀಡಾ ಕ್ಷೇತ್ರದ ದಿಗ್ಗಜರು ಮತ್ತು ಉದ್ಯಮಿಗಳು ಇದಕ್ಕೆ ಬೆಂಬಲ ನೀಡುವಂತೆ ಸಂಘವು ಕೋರಿದೆ.
ಇದಕ್ಕೆ ಸ್ಪಂದಿಸಿರುವ ವಿವಿಧ ಕ್ಷೇತ್ರಗಳ ಗಣ್ಯರಿಂದ ಬೆಳಗ್ಗೆಯಿಂದಲೇ ಭಾರೀ ಬೆಂಬಲದ ಮಹಾಪೂರ ಹರಿದುಬಂದಿದೆ. ಅಖಿಲ ಭಾರತ ಉದ್ದಿಮೆದಾರರ ಸಂಘದಲ್ಲಿ 7 ಕೋಟಿಗೂ ಹೆಚ್ಚು ಮಂದಿ ಸದಸ್ಯರಿದ್ದು, ಚೀನಾ ಉತ್ಪನ್ನಗಳನ್ನು ಮೂಲೆಗುಂಪು ಮಾಡಲು ನಿರ್ಧರಿಸಿದ್ದಾರೆ.
# ಮಂತ್ರಿ-ಮಹೋದಯರ ಕರೆ:
ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತ ಭಾರತಕ್ಕೆ ಪದೇ ಪದೇ ಕಿರುಕುಳ ನೀಡುತ್ತಿರುವ ಚೀನಾಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಕಾರ್ಯತಂತ್ರ ರೂಪಿಸುವ ಸಂದರ್ಭದಲ್ಲೇ ಕೇಂದ್ರ ಸಚಿವರು ಸಹ ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಲು ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡಲು ಕರೆ ನೀಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್, ನಾವು ಭಾರತೀಯರು. ನಮ್ಮ ಉತ್ಪನ್ನಗಳನ್ನೇ ನಾವೆಲ್ಲರೂ ಬಳಸಬೇಕು. ಇನ್ನು ಮುಂದೆ ಚೀನಿ ವಸ್ತುಗಳನ್ನು ಮೂಲೆಗುಂಪು ಮಾಡಬೇಕು ಎಂದು ಕರೆ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಈ ಹಿಂದೆ ಚೀನಾದ ಕಂಪೆನಿಯೊಂದಿಗೆ ನಾಲ್ಕು ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಒಪ್ಪಂದವನ್ನು ಕೂಡಲೇ ರದ್ದುಗೊಳಿಸಿ ಚೀನಾಗೆ ಬಿಸಿ ಮುಟ್ಟಿಸುವಂತೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ಸಚಿವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ಕೊರೊನಾ ವೈರಸ್‍ಅನ್ನು ಇಡೀ ವಿಶ್ವಕ್ಕೇ ಹಂಚಿರುವ ಚೀನಾ ವಿರುದ್ಧ ಈಗಾಗಲೇ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಮತ್ತು ಜಪಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆ ದೇಶದಿಂದ ತಮ್ಮ ಕಂಪೆನಿಗಳನ್ನು ಹಿಂದಕ್ಕೆ ಕರೆಸಿಕೊಂಡಿವೆ.
ಈಗ ಚೀನಾ ವಿರುದ್ಧ ಭಾರತ ದೊಡ್ಡ ಮಟ್ಟದಲ್ಲಿ ಆರ್ಥಿಕ ಸಮರ ಸಾರಿರುವುದು ಸರ್ವಾಧಿಕಾರಿಯಂತೆ ಮೆರೆಯುತ್ತಿರುವ ಚೀನಿ ಅಧ್ಯಕ್ಷ ಗ್ಸಿ ಜಿಂಗ್‍ಪಿಂಗ್ ಕಂಗಾಲಾಗಿದ್ದಾರೆ.
ಒಟ್ಟಾರೆ ಮುಂಬರುವ ದಿನಗಳಲ್ಲಿ ಕುತಂತ್ರಿ ಚೀನಾ ಭಾರೀ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸಲಿದ್ದು, ಅಲ್ಲಿನ ಉದ್ಯಮಕ್ಕೆ ಬಲವಾದ ಕೊಡಲಿ ಪೆಟ್ಟು ಬೀಳಲಿದೆ.