ಬೆಂಗಳೂರು, ನವೆಂಬರ್ 03: 69ನೇ ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ‘ಸ್ಪೇನ್’ (Spain) ದೇಶದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಲ್ಲಿನ ರಚನಾತ್ಮಕ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಸ್ಪೇನ್ ದೇಶದ ರಾಯಭಾರಿ ಅವರು ಕನ್ನಡ ಚಟವಟಿಕೆಗಳಿಗೆ ಬೇಕಾದ ಸ್ಥಳಾವಕಾಶ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ಪರಿಷತ್ ಮಾಹಿತಿ ನೀಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದೇಶದಲ್ಲಿ ಕನ್ನಡ ಕಲರವವನ್ನು ಹಂಚುವ ತಮ್ಮ ಯೋಜನೆಯ ಅಂಗವಾಗಿ ಯುರೋಪ್ ಪ್ರವಾಸದಲ್ಲಿದ್ದಾರೆ. ಇದರ ಅಂಗವಾಗಿ ಅವರು ಸ್ಪೇನ್ ದೇಶದ ವಾಣಿಜ್ಯ ನಗರಿ ಬಾರ್ಸಿಲೋನಾದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಎರಡೂ ಸಂಭ್ರಮಾಚರಣೆಗಳು ಸೇರಿದ “ದೀಪೋತ್ಸವ” ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಭಾರತದ ಹೊಸ ರಾಯಭಾರಿ ಕಚೇರಿಯಲ್ಲಿ ಕನ್ನಡ ತರಗತಿ ಪ್ರಾರಂಭವಾಗಲಿದೆ ಎಂದು ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ.