ವಕ್ಫ್ ಬೋರ್ಡ್ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ತೀವ್ರವಾಗುತ್ತಿದೆ. ಇದರ ಬೆನ್ನಲ್ಲೇ ವಕ್ಫ್ ಬೋರ್ಡ್ ಹಾಗೂ ವಿವಾದದ ಬಗ್ಗೆ ಪ್ರಭಾವಿ ಸಚಿವರೊಬ್ಬರು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಸಂದರ್ಭದಲ್ಲೇ ವಕ್ಫ್ ಆಸ್ತಿ ವಿವಾದ ತೀವ್ರವಾಗಿದೆ. ಇದೀಗ ಕಾಂಗ್ರೆಸ್ ನಾಯಕರು ವಕ್ಫ್ ಬೋರ್ಡ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಡೆಯೇ ಬೊಟ್ಟು ಮಾಡಿದ್ದಾರೆ.
ವಕ್ಫ್ ಬೋರ್ಡ್ ವಿವಾದ ಹಾಗೂ ಶಿಗ್ಗಾಂವಿ ಉಪ ಚುನಾವಣೆಯ ಬಗ್ಗೆ ಮಾತನಾಡಿರುವ ಎಚ್.ಕೆ ಪಾಟೀಲ್ ಅವರು, ಶಿಗ್ಗಾಂವಿ ಉಪಚುನಾವಣೆ ಕಣ ರಂಗೇರತಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಿಗೆ ಈ ಬಾರಿ ಗೆಲ್ತೀವಿ ಅನ್ನೋ ವಿಶ್ವಾಸ ಇದೆ. ಭಾನುವಾರ ಹುಬ್ಬಳ್ಳಿಯಲ್ಲಿ ಸಭೆ ಮಾಡಿದ್ದೇವೆ. ನಾವು ಈ ಬಾರಿ ಉಪಚುನಾವಣೆಯಲ್ಲಿ ಗೆಲ್ಲಬೇಕು ಎಂದಿದ್ದಾರೆ.
ಮುಂದುವರಿದು ವಕ್ಫ್ ಬೋರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ವಕ್ಫ್ ವಿಚಾರವಾಗಿ ಮೊದಲು ಪತ್ರ ಬರೆದಿದ್ದೇ. ಬಿಜೆಪಿಯವರೇ ಇದೀಗ ಉಪ ಚುನಾವಣೆ ಇದೆ ಎಂದು ನಾಟಕವಾಡ್ತಿದ್ದಾರೆ. ಹಿಂದೂ ರೈತರ ಅಲ್ಲ, ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ. ಆದರೆ, ಗದಗ ಜಿಲ್ಲೆಯಲ್ಲಿ ಯಾರಿಗೂ ನೋಟಿಸ್ ಕೊಟ್ಟಿಲ್ಲ. ವಕ್ಫ್ ಎಂದರೆ ದಾನ, ಅದು ಕೂಡಾ ಸರ್ಕಾರದ ಒಂದು ಭಾಗ ಆಗಿದೆ. ದಾನ ಕೊಟ್ಟ ಜಮೀನು ವಿಚಾರವಾಗಿ ಮೇಲ್ವಿಚಾರಣೆ ಮಾಡ್ತಾರೆ ಎಂದು ವಿವರಿಸಿದರು.