ಬೆಳಗಾವಿ, ನವೆಂಬರ್ 03: ಕರ್ನಾಟಕದ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ‘ಗೃಹಲಕ್ಷ್ಮಿ’ ಯೋಜನೆಯೂ ಒಂದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದು ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದೆ. ಯೋಜನೆಯ ನೆರವಿನೊಂದಿಗೆ ಹಲವು ಮಹಿಳೆಯರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಈಗ ಇಂತಹ ಯಶಸ್ಸಿನ ಸುದ್ದಿಯೊಂದು ಬೆಳಗಾವಿ ಜಿಲ್ಲೆಯಿಂದ ಬಂದಿದೆ.
ಬೆಳಗಾವಿ ಜಿಲ್ಲೆಯ ಕುಕಡೊಳ್ಳಿ ಗ್ರಾಮದ ತಾಯವ್ವ ಕ ಲಕಮೋಜಿ ಎಂಬ ಮಹಿಳೆ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು, ಮಿರ್ಚಿ ಮಿಕ್ಸರ್ ಮೆಷಿನ್ (ಖಾರದ ಗಿರಣಿ) ಕೊಂಡು ಹೊಸ ಉದ್ಯಮ ಆರಂಭಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳೆಗೆ ಶುಭ ಕೋರಿ, ನೂತನ ಉದ್ಯಮಕ್ಕೆ ಚಾಲನೆ ನೀಡಿದರು.
ಈ ಕುರಿತು ಪೋಸ್ಟ್ ಹಾಕಿರುವ ಸಚಿವರು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವರವಾದ ‘ಗೃಹಲಕ್ಷ್ಮಿ’ ಯೋಜನೆ ಎಂದು ಹೇಳಿದ್ದಾರೆ. ‘ಕುಕಡೊಳ್ಳಿ ಗ್ರಾಮದ ಶ್ರೀಮತಿ ತಾಯವ್ವ ಕ ಲಕಮೋಜಿ ಎಂಬ ಮಹಿಳೆ ಗೃಹಲಕ್ಷ್ಮಿ ಹಣ ಕೂಡಿಟ್ಟು, ಮಿರ್ಚಿ ಮಿಕ್ಸರ್ ಮಷಿನ್ (ಖಾರದ ಗಿರಣಿ) ಕೊಂಡಿರುವ ಹಿನ್ನೆಲೆಯಲ್ಲಿ ಇಂದು ಮಿರ್ಚಿ ಮಿಕ್ಸರ್ ಮಷಿನ್ ನ್ನು ಉದ್ಘಾಟಿಸಿ, ಮಹಿಳೆಯ ನೂತನ ಉದ್ಯೋಗಕ್ಕೆ ಶುಭ ಕೋರಿದೆ’ ಎಂದು ಸಚಿವರು ಹೇಳಿದ್ದಾರೆ.