ಧಾರವಾಡ: ‘ಬೆಳಕಿನ ಹಬ್ಬ’ ದೀಪಾವಳಿಗೆ ಕಣ್ಣು ಕೋರೈಸುವ `ದೇಸಿ ಆಕಾಶಬುಟ್ಟಿ’ಗಳು ಮತ್ತು ತರಹೇವಾರಿ `ಮಣ್ಣಿನ ಹಣತೆ’ಗಳು ನಗರದ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ.
ಬಟ್ಟೆ, ಕಟ್ಟಿಗೆ, ಮಿಂಚಿನ ಹಾಳೆ, ಉಲನ್ ದಾರದಿಂದ ತಯಾರಿಸಿದ ವಿಭಿನ್ನ ಶೈಲಿಯ ಆಕಾಶಬುಟ್ಟಿಗಳನ್ನು ನೋಡುಗರ ಗಮನ ಸೆಳೆಯುತ್ತಿವೆ.
ಸ್ಟಾರ್, ಗಣಪ, ಲಕ್ಷ್ಮೀ ಬಣ್ಣದ ಬಟ್ಟೆಗಳು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಬಗೆಯ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ.
ಪ್ರತಿ ವರ್ಷ ಚೀನಾದ ಆಕಾಶಬುಟ್ಟಿಗಳು ಮಾರುಕಟ್ಟೆಗೆ ಹೆಚ್ಚಿರುತ್ತಿದ್ದವು ಈ ವರ್ಷದ ವಿಶೇಷ ಎಂದರೆ ಶೇ 75 ರಷ್ಟು `ದೇಸಿ ಆಕಾಶಬುಟ್ಟಿಗಳು’ ಮಾರುಕಟ್ಟೆಗೆ ಬಂದಿದ್ದು, ಶೇ 20 ರಿಂದ 25ರಷ್ಟು ಮಾತ್ರ ಚೀನಾ ಉತ್ಪನ್ನಗಳು ಬಂದಿವೆ. ದೇಸಿ ಆಕಾಶಬುಟ್ಟಿಗಳ ದರ ತುಸು ಹೆಚ್ಚಾಗಿದ್ದು, ಗುಣಮಟ್ಟ ಮತ್ತು ವಿನ್ಯಾಸದಲ್ಲಿ ಉತ್ಕೃಷ್ಟವಾಗಿವೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ಹುಬ್ಬಳ್ಳಿ ಹಾಗೂ ಮುಂಬೈ, ದೆಹಲಿ ಮತ್ತು ಕಲ್ಕತ್ತಾದಿಂದ ಆಕಾಶಬುಟ್ಟಿಗಳನ್ನು ತರಿಸಲಾಗಿದೆ. ಎಲ್‍ಇಡಿ ಆಕಾಶ ಬುಟ್ಟಿಗಳು ಹೊಸದಾಗಿ ಬಂದಿದ್ದು ಜನರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಪ್ಲಾಸಿಕ್ ಹೂವಿನ ಮಾಲೆಗಳು, ಎಲೆಕ್ಟ್ರೀಕಲ್ ದೀಪಗಳು ಮಾರುಕಟ್ಟೆಗೆ ಬಂದಿದ್ದು, ಗಾತ್ರ ಹಾಗೂ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ.
ಹಬ್ಬದ ಹಿಂದಿನ ಎರಡು ದಿನಗಳಲ್ಲಿ ವ್ಯಾಪಾರ ಜೋರಾಗುವ ಸಾಧ್ಯತೆ ಇದೆ. ನಮ್ಮಲ್ಲಿ ₹150 ರಿಂದ ₹800 ರವರೆಗೆ ವಿವಿಧ ದರಗಳ ಆಕಾಶದೀಪಗಳು ಮಾರಾಟ ಮಾಡುತ್ತಿದ್ದೇವೆ ಎಂದು ಎಂದು ವ್ಯಾಪಾರಿ ಮುಜಾಫರ್ ಮಕಾಂದಾರ ತಿಳಿಸಿದರು.