ಹುಬ್ಬಳ್ಳಿ: ತಂತ್ರಜ್ಞಾನ ಆವಿಷ್ಕಾರಗಳು ಹೆಚ್ಚುತ್ತಾ ಹೋದಂತೆ, ಸೈಬರ್ ವಂಚಕರ ಯೋಜನೆ ಮತ್ತು ಯೋಚನೆಗಳು ಸಹ ವಿಸ್ತಾರವಾಗುತ್ತ ಹೋಗುತ್ತಿವೆ. ಒಟಿಪಿ, ಲಿಂಕ್ ಕಳುಹಿಸಿ ಹಣ ವರ್ಗಾವಣೆ, ಮಾರುಕಟ್ಟೆಯಲ್ಲಿ ಹಣ ಹೂಡಿಕೆ ನೆಪದಲ್ಲಿ ಆನ್‌ಲೈನ್ ಕಳ್ಳರು, ಇದೀಗ ‘ಡಿಜಿಟಲ್ ಅರೆಸ್ಟ್’ ಹೆಸರಲ್ಲಿ ಕೋಟಿ ಕೋಟಿ ವಂಚಿಸುತ್ತಿದ್ದಾರೆ.
ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಒಂದು ವಾರದ ಅವಧಿಯಲ್ಲಿ ‘ಡಿಜಿಟಲ್ ಅರೆಸ್ಟ್’ ಸಂಬಂಧಿಸಿ ಮೂರು ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹1.84 ಕೋಟಿ ವರ್ಗಾಯಿಸಿಕೊಂಡಿದ್ದಾರೆ.
ಬ್ಯಾಂಕ್ ನಿವೃತ್ತ ನೌಕರರಾದ ಧಾರವಾಡದ ಗಣಪತಿ ಅವರಿಗೆ ‘ಅಶ್ಲೀಲ ವಿಡಿಯೊ ಹಾಗೂ ಜಾಹೀರಾತು ಪ್ರದರ್ಶನ ಮಾಡಿರುವ ಆರೋಪದ ಕುರಿತು ಪ್ರಕರಣ ದಾಖಲಾಗಿದೆ’ ಎಂದು ಮುಂಬೈ ಪೊಲೀಸರ ಹೆಸರಲ್ಲಿ ಕರೆ ಮಾಡಿ ಬೆದರಿಸಿ, ₹95.50 ಲಕ್ಷ; ‘ನಕಲಿ ಪಾರ್ಸ್‌ಪೋರ್ಟ್,
ಎಟಿಎಂ ಕಾರ್ಡ್ ಹಾಗೂ ಡ್ರಗ್ಸ್ ಪಾರ್ಸಲ್ ನಿಮ್ಮ ವಿಳಾಸಕ್ಕೆ ಬಂದಿದೆ’ ಎಂದು ಹುಬ್ಬಳ್ಳಿಯ ದವನ್ ಅವರಿಗೆ ಕಸ್ಟಮ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿ ಬೆದರಿಸಿ ₹7.49 ಲಕ್ಷ ಹಾಗೂ ಅಕ್ಷಯ ಎನ್ನುವವರಿಗೆ ‘ತೈವಾನ್‌ನಿಂದ ಪಾರ್ಸಲ್ ಬಂದಿದ್ದು, ಅದರಲ್ಲಿ ಕಾನೂನು ಬಾಹಿರ ವಸ್ತುಗಳಿವೆ’ ಎಂದು ಕ್ರೈಂ ಬ್ರ್ಯಾಂಚ್ ಡಿಸಿಪಿ ಹೆಸರಲ್ಲಿ ಬೆದರಿಸಿ ₹81.06 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.