ಹಾಸನ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ವಿಧಾನಸಭಾ ಚುನಾವಣೆಗಳ ಪೈಕಿ ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ನಡುವಿನ ನೇರಾ ಹಣಾಹಣಿ ಹಾಗೂ ಕಾಂಗ್ರೆಸ್-ಎನ್ ಡಿಎ ಪಕ್ಷಗಳ ಪ್ರತಿಷ್ಠೆಯೇ ಇದಕ್ಕೆ ಕಾರಣ.
ಈ ಮಧ್ಯೆ ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದೇಶ್ವರ ಸ್ವಾಮಿ ಬಲಗಡೆಯಿಂದ ಹೂವು ನೀಡಿದ್ದು, ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ ಎಂಬ ಶುಭ ಸೂಚನೆಯಾಗಿದೆ ಎನ್ನುವ ಚರ್ಚೆ ಶುರುವಾಗಿದೆ.
ಹೌದು. ಪತ್ನಿ, ಸೊಸೆ , ಮೊಮ್ಮಗನ ಜೊತೆಗೆ ಕುಮಾರಸ್ವಾಮಿ ಹಾಸನಾಂಬೆ ದರ್ಶನ ನಂತರ ಸಿದ್ದೇಶ್ವರ ಸ್ವಾಮಿ ದರ್ಶನ ಮಾಡಿದಾಗ ಬಲಗಡೆಯಿಂದ ಹೂ ಬಿದ್ದಿದೆ.ದೇವರ ಮೇಲಿಂದ ಹೂವು ಬಿದ್ದಾಗ ಪತ್ನಿ ಅನಿತಾ ಅವರು ಕುಮಾರಸ್ವಾಮಿ ಅವರಿಗೆ ಕೈ ಸನ್ನೆ ಮಾಡಿ ತಿಳಿಸಿದ್ದಾರೆ.
ಶುಭ ಸಮಾರಂಭ ಆಯೋಜಿಸುವ ಮುನ್ನ ಭಕ್ತರು ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕದ ನಂತರ ಪ್ರಸಾದ ಕೇಳುವುದು ವಾಡಿಕೆ. ಅದರಂತೆ ಪ್ರಸಾದ ಸಿಕ್ಕ ನಂತರ ಶುಭ ಕಾರ್ಯ ನೆರವೇರಿರುವ ನಂಬಿಕೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.