ಬಳ್ಳಾರಿ: ಸಂಡೂರು ಉಪಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದುವರೆಗೂ ಪ್ರಚಾರದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಶ್ರೀರಾಮುಲು ಕೊನೆಗೂ ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದು, ಜನಾರ್ದನ ರೆಡ್ಡಿ ಜೊತೆ ಜಂಟಿ ಪ್ರಚಾರ ಆರಂಭಿಸಿದ್ದಾರೆ.
ಇಬ್ಬರು ನಾಯಕರ ಜಂಟಿ ಪ್ರಚಾರ ಹಲವರ ಹುಬ್ಬೇರುವಂತೆ ಮಾಡಿದೆ.
2023ರ ಚುನಾವಣೆ ವೇಳೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಆಂತರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಬಳಿಕ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪನೆ ಮಾಡಿದರು. ಬಳಿಕ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದರು. ಈ ನಡುವೆ 14 ವರ್ಷಗಳ ನಂತರ ರೆಡ್ಡಿಯವರು ಬಳ್ಳಾರಿಗೆ ಮರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಇದೀಗ ರೆಡ್ಡಿಯವರು ಜಿಲ್ಲೆಗೆ ಮರಳಿದ್ದಾರೆ. ಈ ಮೂಲಕ ಜಿಲ್ಲಾ ಬಿಜೆಪಿ ಘಟಕಕ್ಕೆ ಬಹುದೊಡ್ಡ ಶಕ್ತಿ ದೊರಕಿದಂತಾಗಿದೆ.
ಆಂತರಿಕ ಸಮಸ್ಯೆಯಿಂದ ಹಿಂದೆ ಸರಿದಿದ್ದ ರಾಮುಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವೊಲಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ರಾಮುಲು, ಅದರಂತೆ ಪ್ರಚಾರದಲ್ಲಿ ತೊಡಗಿದ್ದರು.