ಕಿತ್ತೂರು : ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಪ್ರಯುಕ್ತ ಬುಧವಾರ ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಸಾದರಪಡಿಸಿತು. ರಾಜಬೀದಿಯಲ್ಲಿ ಜನಸಾಗರವಿದ್ದರೆ, ಸಂಭ್ರಮವು ಎಲ್ಲೆಡೆ ಆವರಿಸಿತ್ತು. ಎಲ್ಲರೂ ಜೊತೆಗೂಡಿ ಚೆಂದದ ಲೋಕವನ್ನೇ ಸೃಷ್ಟಿಸಿದ್ದರು.

ರಾಜ್ಯದಾದ್ಯಂತ ಸಂಚರಿಸಿ ಬಂದ ‘ವಿಜಯ ಜ್ಯೋತಿ’ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಾಗತಿಸಿದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೆರವಣಿಗೆಗೆ ಚಾಲನೆ ನೀಡಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೂರಡಿ ವಿಸ್ತಾರದ ರಾಜಬೀದಿಯಲ್ಲಿ ಜನ ನದಿಯಂತೆ ಹರಿದು ಬಂದರು.
ವೇಷಭೂಷಣ, ಸಿಳ್ಳೆ ಚಪ್ಪಾಳೆ ಕೇಕೆಗಳ ಮಧ್ಯೆ ಹೆಜ್ಜೆ ಹಾಕಿದ ಕಲಾತಂಡಗಳು, ದೇಸಿವಾದ್ಯಗಳ ಸದ್ದು, ಗೆಜ್ಜೆನಾದ, ಹಲಗೆಮೇಳ, ಡೊಳ್ಳು- ಢಮರುಗ, ಜಾಂಝ್‌ಪಥಕ್, ಕೀಲುಕುದುರೆ, ಕೋಳಿನೃತ್ಯ, ಗೊರವರ ಕುಣಿತ, ದೊಡ್ಡಸಂಬಾಳ ಮೇಳ, ನಗಾರಿ, ನಂದಿಧ್ವಜ, ಜಗ್ಗಲಿಗೆ ಮೇಳ, ಯಕ್ಷಗಾನ, ವೀರಗಾಸೆ ಕಲಾವಿದರು ಪಾಲ್ಗೊಂಡಿದ್ದರು.
ಕಿತ್ತೂರು ರಾಜಬೀದಿಯಲ್ಲಿ ವಿಜಯಜ್ಯೋತಿ ಬರುತ್ತಿದ್ದಂತೆಯೇ ಜನರು ರಸ್ತೆಗೆ ನೀರು ಹಾಕಿದರು. ಜ್ಯೋತಿಗೆ ಎಣ್ಣೆಹಾಕಿ, ಕರ್ಪೂರ ಹಚ್ಚಿ, ತೆಂಗಿನಕಾಯಿ ಒಡೆದು, ನೈವೇದ್ಯ ಮಾಡಿದರು. ರಾಣಿ ಚನ್ನಮ್ಮನ ಮೂರ್ತಿಗೆ ಹೂ ಅರ್ಪಿಸಿ ನಮಸ್ಕರಿಸಿದರು. ವಿಜಯಜ್ಯೋತಿ ಮುಂದೆ 501 ಪೂರ್ಣಕುಂಭ ಕಳಶ ಹೊತ್ತ ವನಿತೆಯರು ಬರಿಗಾಲಲ್ಲಿ ಸಾಗಿದರು.
1824ರ ಅಕ್ಟೋಬರ್ 23ರಂದು ಕಿತ್ತೂರು ಸೇನೆ ಬ್ರಿಟಿಷ್ ಸೈನ್ಯದ ವಿರುದ್ಧ ವಿಜಯ ಸಾಧಿಸಿತು. ಆ ವಿಜಯಕ್ಕೆ 200 ವಸಂತಗಳು ತುಂಬಿವೆ. ಈ ಹಿಂದೆಂದಿಗಿಂತಲೂ ದ್ವಿಶತಮಾನೋತ್ಸವ ವೈಭವೋಪೇತವಾಗಿ ನಡೆಯಿತು.
Laxmi News 24×7