ರಾಯಚೂರು: ನೆರೆಯಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಮತ್ತೆ ನಿವಾರ್ ನಿಂದ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಜಿಲ್ಲೆಯ ರೈತರು ನಿವಾರ್ ಚಂಡಮಾರುತದಿಂದ ಮತ್ತೆ ಹಾನಿಗೊಳಗಾಗಿದ್ದಾರೆ.ಸತತವಾಗಿ ಸುರಿದ ಮಳೆಗೆ ಹತ್ತಿ, ಭತ್ತ ಬೆಳೆ ನಾಶವಾಗಿದ್ದು, ರೈತರು ಮತ್ತೆ ನಷ್ಟಕ್ಕೆ ಸಿಲುಕಿದ್ದಾರೆ. ಬಿಡಿಸಿ ತಂದಿದ್ದ ಹತ್ತಿ, ಭತ್ತದ ಬೆಳೆ ಮಳೆಗೆ ಒದ್ದೆಯಾದರೆ, ಜಮೀನಿನಲ್ಲಿದ್ದ ಹತ್ತಿ, ಭತ್ತ ಬೆಳೆ ಸಹ ಸಂಪೂರ್ಣ ನೆಲಕ್ಕಚ್ಚಿದೆ. ಸ್ವಲ್ಪ ನಿರೀಕ್ಷೆಯಲ್ಲಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸತತವಾಗಿ ಸುರಿದ ಮಳೆಗೆ ರೈತರ ಕನಸೆಲ್ಲಾ ನುಚ್ಚು ನೂರಾಗಿದ್ದು, ಅತೀವೃಷ್ಟಿಯಿಂದ ಪಾರಾಗಿ ಜಮೀನಿಗೆ ಖರ್ಚುಮಾಡಿದ ಹಣವಾದರೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರಾಯಚೂರಿನ ಭತ್ತ ಹಾಗೂ ಹತ್ತಿ ಬೆಳೆಗಾರರಿಗೆ ನಿವಾರ್ ನಿರಾಸೆ ಉಂಟುಮಾಡಿದೆ. ಚಂಡಮಾರುತದ ಪರಿಣಾಮ ಎರಡು ದಿನ ಸುರಿದ ಮಳೆ, ಗಾಳಿಗೆ ಜಿಲ್ಲೆಯ ಸಿರವಾರ, ಮಾನ್ವಿ, ದೇವದುರ್ಗ ಸೇರಿ ಹಲವೆಡೆ ಭತ್ತದ ಬೆಳೆ ಹಾನಿಗೀಡಾಗಿದೆ.
ಎಕರೆಗೆ 45 ಚೀಲ ಭತ್ತ ಸಿಗುವಲ್ಲಿ ಈ ವರ್ಷ 25 ಚೀಲದ ನಿರೀಕ್ಷೆಯಿತ್ತು. ಆದರೆ ಚಂಡಮಾರುತ ಅದನ್ನೂ ಹುಸಿಗೊಳಿಸಿ ರೈತರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಭತ್ತ ಒದ್ದೆಯಾಗಿರುವುದರಿಂದ ದಲ್ಲಾಳಿಗಳು 75 ಕೆ.ಜಿ ಚೀಲದ ಭತ್ತಕ್ಕೆ 850 ರೂ. ಹೇಳುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಮಾಡಿದರೆ ಮಾತ್ರ ರೈತರು ಸಂಕಷ್ಟದಿಂದ ಪಾರಾಗಬಹುದು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.