ಬೆಳಗಾವಿ: ಜಿಲ್ಲೆಯಲ್ಲಿ ಅಕ್ಟೋಬರ್ 21ರಿಂದ ನವೆಂಬರ್ 20ರ ವರೆಗೆ 6ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ ಕೂಲೇರ ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧ್ಯಕ್ಷತೆಯಲ್ಲಿ ನಡೆದ ಲಸಿಕಾಕರಣದ ಜಿಲ್ಲಾ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
‘ಜಿಲ್ಲೆಯಾದ್ಯಂತ ಲಸಿಕೆದಾರರು ಮಾಲೀಕರ ಮನೆ- ಮನೆಗಳಿಗೆ ತೆರಳಿ ಜಾನುವಾರಗಳಿಗೆ ಲಸಿಕೆಯನ್ನು ಉಚಿತವಾಗಿ ಹಾಕಲಿದ್ದಾರೆ. 20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 13,93,711 ಜಾನುವಾರುಗಳಿದ್ದು, ಜಿಲ್ಲೆಯ 15 ತಾಲ್ಲೂಕುಗಳಲ್ಲಿರುವ ಎಲ್ಲ ಗ್ರಾಮ ಹಾಗೂ ವಾರ್ಡ್‌ಗಳಲ್ಲಿ 1,080 ಲಸಿಕಾದಾರರು ಮನೆಗಳಿಗೆ ತೆರಳಿ ಲಸಿಕೆ ನೀಡಲಿದ್ದಾರೆ. ಈ ಹಿಂದೆ ಜರುಗಿದ 5ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಲಭ್ಯವಿರುವ ಒಟ್ಟು 12,31,435 ಜಾನುವಾರು (ದನ ಮತ್ತು ಎಮ್ಮೆ)ಗಳಿಗೆ ಲಸಿಕೆ ಹಾಕಲಾಗಿದೆ. 5ನೇ ಸುತ್ತಿನ ಅಂತ್ಯದಲ್ಲಿ 36,000 ಡೋಜ್‍ಗಳಷ್ಟು ಲಸಿಕೆಯೂ ಉಳಿಕೆಯಾಗಿದ್ದು, 6ನೇ ಸುತ್ತೀನ ಲಸಿಕಾ ಅಭಿಯಾನಕ್ಕೆ ಜಿಲ್ಲೆಗೆ 12,52,000 ಡೋಜ್‍ಗಳಷ್ಟು ಸರಬರಾಜು ಆಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಒಟ್ಟು 12,88,000 ಡೋಜ್‍ಗಳಷ್ಟು ಲಸಿಕೆ ಲಭ್ಯವಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ‘ಜಿಲ್ಲೆಯಲ್ಲಿ ಅರ್ಹತೆ ಹೊಂದಿರುವ ಎಲ್ಲ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿ ಪ್ರತಿಶತ 100ರಷ್ಟು ಗುರಿ ಸಾಧಿಸಬೇಕು. ಯಾವುದೇ ಹಂತದಲ್ಲಿಯೂ ಶೀಥಲೀಕರಣದ ವ್ಯವಸ್ಥೆ ಹಾಳಾಗದಂತೆ ನೋಡಿಕೊಂಡು, ಲಸಿಕೆಗೂ ಮುನ್ನ ಸಾಕಷ್ಟು ಪ್ರಚಾರ ಕೈಕೊಂಡು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು’ ಎಂದು ಸೂಚಿಸಿದರು.