ಬೆಂಗಳೂರು, ನ.29- ಸಚಿವ ಸಂಪುಟ ವಿಸ್ತರಣೆಯಾಗಬೇಕಾದರೆ ಎಲ್ಲರೂ ಕಾಯಲೇಬೇಕು ಎನ್ನುವ ಮೂಲಕ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗುವುದು ಬಹುತೇಕ ಖಚಿತವಾಗಿದೆ.ಸಂಪುಟ ವಿಸ್ತರಣೆಯಾವಾಗ ಆಗುತ್ತೋ ನೋಡೋಣ ಅಲ್ಲಿಯವರೆಗೂ ನಾವು ನೀವು (ಮಾಧ್ಯಮದವರು) ಕಾಯಲೇಬೇಕು ಎಂದು ಹೇಳುವ ಮೂಲಕ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ಸಿಎಂ ಯಡಿಯೂರಪ್ಪ ತಣ್ಣೀರೆರಚಿದ್ದಾರೆ.
ಚಿತ್ರದುರ್ಗಕ್ಕೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾಗಬೇಕಾದರೆ ನಾವು ಕಾಯಲೇಬೇಕು ಅದು ಯಾವಾಗ ನಡೆಯಲಿದೆ ಎಂಬುದನ್ನು ನೋಡೋಣ ಎಂದು ಪರೋಕ್ಷವಾಗಿ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗುವ ಮುನ್ಸೂಚನೆಯನ್ನು ನೀಡಿದರು.
ಮೂಲಗಳ ಪ್ರಕಾರ ಡಿ.15ರಂದು ಅವೇಶನದ ಮುಗಿಯುವವರೆಗೂ ಸಂಪುಟ ವಿಸ್ತರಣೆ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವುದರಿಂದ ಅವರ ಭೇಟಿಯೂ ಸಾಧ್ಯವಾಗುತ್ತಿಲ್ಲ. ಇನ್ನು ಬಿಜೆಪಿ ಡಿ.3 ಮತ್ತು 4ರಂದು ಗ್ರಾಮ ಸ್ವರಾಜ್ ಅಭಿಯಾನ ಹಮ್ಮಿಕೊಂಡಿರುವುದರಿಂದ ಪಕ್ಷದ ಬಹುತೇಕ ಪ್ರಮುಖ ನಾಯಕರು ಅದರಲ್ಲಿ ತೊಡಗಿಕೊಳ್ಳುತ್ತಾರೆ.
ಡಿ.5ರಂದು ಬೆಳಗಾವಿಯಲ್ಲಿ ಪಕ್ಷದ ವಿಶೇಷ ಕಾರ್ಯಕ್ರಮ ವಿರುವುದರಿಂದ ಅಲ್ಲಿಯೂ ಎಲ್ಲಾ ನಾಯಕರು ಪಾಲ್ಗೊಳ್ಳುವರು. ಈಗಾಗಲೇ ಪಕ್ಷದ ಅಕೃತಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ ಸಂಪುಟ ವಿಸ್ತರಣೆ ಗಗನ ಕುಸುಮವಾಗಿಯೇ ಉಳಿದಿದೆ. ಡಿ.7ರಿಂದ 15ರವರೆಗೆ ಚಳಿಗಾಲದ ಅವೇಶನ ನಿಗದಿಯಾಗಿದೆ. ಹೀಗೆ ಸರಣಿ ಸಭೆಗಳು ನಡೆಯುತ್ತಿರುವುದರಿಂದ ಸಂಪುಟ ವಿಸ್ತರಣೆ ಸದ್ಯಕ್ಕಂತೂ ಆಗುವುದು ಕನಸಿನ ಮಾತಾಗಿದೆ.