ಕೊಪ್ಪಳ: ಮಚ್ಚಿನಿಂದ ಕೊಚ್ಚಿ ಪಾಪಿ ಪತಿ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಯಲ್ಲಪ್ಪ ಪತ್ನಿ ರೇಣುಕಾ (32)ಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತಿ ಮತ್ತು ಪತ್ನಿ ರೇಣುಕಾ ಒಳಜಗಳವೇ ಕೊಲೆಗೆ ಕಾರಣ ಎನ್ನಲಾಗಿದ್ದು, ಕೆಲವು ತಿಂಗಳ ಹಿಂದೆ ಪತಿ-ಪತ್ನಿ ಇಬ್ಬರೂ ಜಗಳವಾಡಿಕೊಂಡಿದ್ದರು. ಬಳಿಕ ಯಲ್ಲಪ್ಪನ ಕಿರಿಕಿರಿಗೆ ಬೇಸತ್ತು ರೇಣುಕಾ ತವರು ಮನೆ ಸೇರಿದ್ದಳು.
ಕೆಲವು ದಿನಗಳಿಂದ ರೇಣುಕಾ ತವರು ಮನೆಯಲ್ಲೇ ಉಳಿದುಕೊಂಡಿದ್ದಳು. ಶುಕ್ರವಾರವಷ್ಟೇ ಯಲ್ಲಪ್ಪನ ಅಣ್ಣ ಮಂಗಳಪ್ಪ ಮತ್ತು ಅತ್ತಿಗೆ ಹಾಗೂ ಇತರರು ಸೇರಿ ರೇಣುಕಾಳನ್ನು ತವರುಮನೆಯಿಂದ ಕರೆ ತಂದಿದ್ದರು. ಬಳಿಕ ಇಬ್ಬರಿಗೂ ಬುದ್ಧಿವಾದ ಹೇಳಿ ರೇಣುಕಾಳನ್ನು ಗಂಡನ ಮನೆಯಲ್ಲಿ ಬಿಟ್ಟು ಹೋಗಿದ್ದರು.
ಇಂದು ಮತ್ತೆ ದಂಪತಿ ಮಧ್ಯೆ ಜಗಳ ಶುರುವಾಗಿದ್ದು, ಸಿಟ್ಟಿಗೆದ್ದ ಪತಿ ಯಲ್ಲಪ್ಪ, ಮಚ್ಚಿನಿಂದ ಪತ್ನಿ ರೇಣುಕಾಳನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಬೇವುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.