ಮೈಸೂರು: ‘ಬಿಜೆಪಿ ನಾಯಕರಿಗೆ ಮಾಡಲು ಕೆಲಸವಿಲ್ಲ. ಆದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಫ್‌ಐಆರ್ ದಾಖಲಾದಾಕ್ಷಣ ರಾಜೀನಾಮೆ ನೀಡಬೇಕೆಂಬ ಕಾನೂನಿದೆಯೇ?
ಬಿಜೆಪಿಯವರು ಸುಮ್ಮನೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರಲ್ಲಿ ಎಷ್ಟು ಜನರು ಜಾಮೀನಿನ ಮೇಲಿಲ್ಲ? ಆ ಪಕ್ಷದ ಎಷ್ಟೋ ಮಂದಿಗೆ ರಾಜಕಾರಣಿ ಆಗಲು ಯೋಗ್ಯತೆ ಇದೆಯೇ? ಅವರು ರಾಜಕಾರಣ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
’12 ವರ್ಷದ ಹಳೆಯ ಕೇಸನ್ನು ಬಿಜೆಪಿಯವರು ಸ್ವಾರ್ಥಕ್ಕಾಗಿ ಈಗ ಎಳೆಯುತ್ತಿದ್ದಾರೆ. ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದಾರೆ. ಬಿಜೆಪಿಯವರು ಇದನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲ’ ಎಂದು ಆರೋಪಿಸಿದರು.
‘ಸಿದ್ದರಾಮಯ್ಯ ಅವರಿಗೆ ಇನ್ನೂ ಆಯ್ಕೆಗಳಿವೆ. ಕಾನೂನು ಹೋರಾಟ ಮಾಡುತ್ತಾರೆ. ನಿರಪರಾಧಿ ಎಂಬುದು ಸಾಬೀತಾದಾಗ ಬಿಜೆಪಿಯ ಎಲ್ಲರೂ ರಾಜೀನಾಮೆ ಕೊಡುತ್ತಾರೆಯೇ? ಬಿಜೆಪಿಯವರು ಇನ್ನು ನಾಲ್ಕು ವರ್ಷ ಇದನ್ನೇ ಮಾಡಿಕೊಂಡು ಕೂರಲಿ’ ಎಂದರು.
Laxmi News 24×7