ಹುಬ್ಬಳ್ಳಿ: ನಿಮ್ಮ ಮನೆಯಲ್ಲಿ ಪುಸ್ತಕಗಳಿವೆಯೇ? ಬೇರೆಯವರೂ ಅವುಗಳನ್ನು ಓದಬೇಕೆ? ಹಾಗಿದ್ದರೆ, ಅವುಗಳನ್ನು ಅಲ್ಲಿಯೇ ದೂಳು ಹಿಡಿಸುವ ಅಥವಾ ಬಿಸಾಡುವ ಬದಲು; ಚುಟುಕು ಸಾಹಿತ್ಯ ಪರಿಷತ್ತಿಗೆ ನೀಡಿ. ನೀವು ಓದಿ, ಆಸ್ವಾದಿಸಿದ ಪುಸ್ತಕಗಳನ್ನು ಇತರರೂ ಓದಿ, ಆನಂದಿಸುವರು.
ಓದಿನ ಅಭಿರುಚಿ, ಜ್ಞಾನ ಪಸರಿಸಿದ ಖುಷಿ ನಿಮಗೂ ಲಭಿಸುತ್ತದೆ.
ಹೌದು, ಮನೆಯಲ್ಲಿ ಹೆಚ್ಚು ಪುಸ್ತಕ ಇಟ್ಟುಕೊಂಡವರಿಗೆ, ಅವುಗಳ ನಿರ್ವಹಣೆ ದೊಡ್ಡ ಸವಾಲು. ಓದಿನ ಆಸಕ್ತಿ ಇದ್ದವರಿಗೆ ಪುಸ್ತಕ ಕೊಳ್ಳುವುದು ಕಷ್ಟಸಾಧ್ಯ. ಇಂತಹವರ ನಡುವೆ ಸೇತುವೆಯಾಗಿದೆ ಚುಟುಕ ಸಾಹಿತ್ಯ ಪರಿಷತ್ತು. ‘ಪುಸ್ತಕ ದಾಸೋಹ’ ಅಭಿಯಾನದ ಮೂಲಕ ಪರಿಷತ್ 10 ವರ್ಷಗಳಲ್ಲಿ 3 ಲಕ್ಷ ಪುಸ್ತಕಗಳನ್ನು ದಾನಿಗಳಿಂದ ಸಂಗ್ರಹಿಸಿ, ವಿತರಿಸಿದೆ.
ಪರಿಷತ್ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಹೂವು, ಉಡುಗೊರೆ ನೀಡುವುದಿಲ್ಲ. ಸಂಗ್ರಹವಾದ ಪುಸ್ತಕಗಳನ್ನೇ ಕೊಡುಗೆಯಾಗಿ ನೀಡಲಾಗುತ್ತದೆ. ಕವಿಗೋಷ್ಠಿ ನಡೆಸಿದರೆ, ಅಲ್ಲಿ ಬಹುಮಾನ ನೀಡುವುದೂ ಪುಸ್ತಕಗಳನ್ನೇ. ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ, ಆ ಬಗ್ಗೆ ಕಿರುಪರೀಕ್ಷೆ ನಡೆಸಿ, ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಲಾಗುತ್ತದೆ.
‘ಪುಸ್ತಕ ದಾಸೋಹ’ ಕಾಯಕದ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದ ಪರಿಷತ್ತಿನ ರಾಜ್ಯ ಸಂಚಾಲಕ, ಹುಬ್ಬಳ್ಳಿಯ ಕೃಷ್ಣಮೂರ್ತಿ ಕುಲಕರ್ಣಿ ಅವರು, ‘ಇತ್ತೀಚಿನ ಕಾಲಘಟ್ಟದಲ್ಲಿ ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಕೆಲವರಿಗೆ ಆದರ ಅಭಿರುಚಿ ಇದ್ದರೂ, ಹಣಕಾಸಿನ ಸಮಸ್ಯೆಯಿಂದ ಪುಸ್ತಕ ಕೊಳ್ಳಲಾಗುವುದಿಲ್ಲ. ಅದನ್ನು ನೀಗಸಲೆಂದೇ ಪರಿಷತ್ತು ವಿನೂತನ ಅಭಿಯಾನ 10 ವರ್ಷಗಳ ಹಿಂದೆ ಆರಂಭಿಸಿತು. ಇದಕ್ಕೆ ಸಿಕ್ಕ ಸ್ಪಂದನೆ ಅಭೂತಪೂರ್ವ’ ಎಂದು ಹೇಳಿದರು.