ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ರಮೇಶ ಕತ್ತಿ ರಾಜೀನಾಮೆ ನೀಡುವ ಮೂಲಕ, ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಮ್ಮೆ ಧ್ರುವೀಕರಣ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿದ್ದವರು ಈಗ ದೋಸ್ತಿ ಆಗಿದ್ದರೆ; ಆಗ ಗೆಳೆಯರಾಗಿದ್ದವರು ಈಗ ವಿರೋಧಿಗಳು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ರಮೇಶ ಕತ್ತಿ ಪೈಪೋಟಿ ನಡೆಸಿದ್ದರು. ಇದೇ ಕ್ಷೇತ್ರದಿಂದ ಇಬ್ಬರೂ ಒಂದೊಂದು ಬಾರಿ ಸಂಸದರಾಗಿದ್ದಾರೆ. ಬಿಜೆಪಿ ಅಣ್ಣಾಸಾಹೇಬ ಅವರಿಗೆ ಅವಕಾಶ ನೀಡಿತು. ಮುನಿಸಿಕೊಂಡ ರಮೇಶ ಕತ್ತಿ ಪ್ರಚಾರದಿಂದ ದೂರ ಉಳಿದರು. ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ, ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಗೆಲುವಿಗೆ ಕಾರಣವಾದರು ಎಂಬುದು ಅಣ್ಣಾಸಾಹೇಬ ಮನಸ್ತಾಪ.
‘ನನ್ನನ್ನು ಸೋಲಿಸಿದವರು ಹೇಗೆ ಅಧಿಕಾರದಲ್ಲಿ ಇರುತ್ತಾರೋ ನೋಡುತ್ತೇನೆ’ ಎಂದು ಅಣ್ಣಾಸಾಹೇಬ ಆಗ ಬಹಿರಂಗವಾಗಿ ತೊಡೆ ತಟ್ಟಿದ್ದರು. ಹೈ ಕಮಾಂಡ್‌ಗೂ ದೂರು ಸಲ್ಲಿಸಿದ್ದರು.
‘ಲೋಕಸಭೆ ರಾಜಕಾರಣದ ಸೇಡನ್ನು ಅಣ್ಣಾಸಾಹೇಬ ಸಹಕಾರ ಕ್ಷೇತ್ರದಲ್ಲಿ ತೀರಿಸಿಕೊಂಡಿದ್ದಾರೆ. ‘ಸಂಗನಮತ’ ಮಾಡಿಕೊಂಡು ರಮೇಶ ಕತ್ತಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದ್ದಾರೆ’ ಎಂಬುದು ಧುರೀಣರ ವಿಶ್ಲೇಷಣೆ.