ಬೀಜಿಂಗ್: ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿಸಿ, ಸುಳ್ಳು ಮಾಹಿತಿಗಳನ್ನು ನೀಡಿದ್ದ ಚೀನಾ ಈಗ ಕೊರೊನಾ ವಿಚಾರದಲ್ಲಿ ಅತಿ ದೊಡ್ಡ ಸುಳ್ಳು ಹೇಳಿ ನಗೆಪಾಟಲಿಗೆ ಗುರಿಯಾಗಿದೆ.
ಕೊರೊನಾ ವೈರಸ್ ಚೀನಾದಲ್ಲಿ ಸೃಷ್ಟಿಯಾಗಿಲ್ಲ. ಈ ವೈರಸ್‌ನ ಮೂಲ ಭಾರತ ಎಂದು ಹೇಳಿ ತನ್ನ ಮೇಲೆ ಬಂದಿದ್ದ ಕಳಂಕವನ್ನು ತೊಳೆಯಲು ಮತ್ತೊಂದು ಸುಳ್ಳು ಹೇಳಿದೆ. 2019ರ ಬೇಸಿಗೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಅಶುದ್ಧ ನೀರಿನ ಮೂಲಕ ಮೊದಲು ವೈರಸ್ ಹರಡಿದೆ. ಈ ವೈರಸ್ ಹೇಗೋ ವುಹಾನ್ ತಲುಪಿದೆ ಎಂದು ಮೊಂಡುವಾದ ಮಂಡಿಸಿದೆ.
ತನ್ನ ಮೇಲೆ ಬಂದಿರುವ ಕಳಂಕವನ್ನು ತೊಡೆದು ಹಾಕಲು ಚೀನಾ ಮಾಧ್ಯಮಗಳು ಈಗ ಕೊರೊನಾ ವಿಚಾರದಲ್ಲಿ ಸರಣಿ ಸುಳ್ಳು ವರದಿಗಳನ್ನು ಪ್ರಕಟಿಸಲು ಆರಂಭಿಸಿದ್ದು, ಭಾರತದಲ್ಲಿ ವೈರಸ್ ಸೃಷ್ಟಿಯಾಗಿದೆ ಎಂದು ಹೇಳಿದೆ.
ವಿಶ್ವದ ವಿವಿಧ ರಾಷ್ಟ್ರಗಳಿಂದ ಆಹಾರ ಉತ್ಪನ್ನಗಳನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ವಿಶೇಷವಾಗಿ ಭಾರತದಿಂದ ಮೀನುಗಳನ್ನು ತರಿಸಿಕೊಳ್ಳುತ್ತದೆ. ಈ ಮೂಲಕ ಚೀನಾಗೆ ವೈರಸ್ ಪ್ರವೇಶ ಆಗಿರುವ ಸಾಧ್ಯತೆಯಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಮೂಲ ಪತ್ತೆ ಹಚ್ಚಲು ಆರಂಭಿಸುತ್ತಿರುವಾಗಲೇ ಚೀನಾ ಮಾಧ್ಯಮಗಳು ಈ ವರದಿ ಪ್ರಕಟಿಸುತ್ತಿರುವುದು ವಿಶೇಷವಾಗಿದೆ.