ಧಾರವಾಡ: ‘ಮುಡಾ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ವಾಪಸ್ ನೀಡಿದ್ದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಅವರ ಗೌರವ ಮತ್ತು ಪ್ರತಿಷ್ಠೆ ತುಂಬಾ ಮುಖ್ಯ. ಅದಕ್ಕೆ ನಿವೇಶನಗಳನ್ನು ವಾಪಸ್ ನೀಡಿದ್ದಾರೆ’ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯವರೇ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ನಿವೇಶನಗಳನ್ನು ವಾಪಸ್ ನೀಡಿದ್ದಕ್ಕೆ ‘ಯು ಟರ್ನ್’ ಎಂದರೆ ಏನರ್ಥ? ನಿವೇಶನಗಳನ್ನು ವಾಪಸ್ ನೀಡಬಾರದು ಎಂಬ ಕಾನೂನು ಇದೆಯೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರ ಪತ್ನಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿಲ್ಲ. ಅವರ ವಿರುದ್ಧ ಲೋಕಾಯುಕ್ತ ಮತ್ತು ಇ.ಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆದಿದೆ. ಇ.ಡಿ ಬಳಸಿಕೊಂಡು ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸುವುದು ರಾಜಕೀಯ ಕುತಂತ್ರ’ ಎಂದರು.
Laxmi News 24×7