ಗದಗ: ಹೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪ್ರವಹಿಸಿ 11 ಕುರಿ ಮತ್ತು 1 ನಾಯಿ ಸಾವಿಗೀಡಾದ ಘಟನೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಯಲ್ಲಿ ಸೋಮವಾರ (ಸೆ.30) ಸಂಜೆ ನಡೆದಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ನವಲಪ್ಪ ಹೆಗಡೆ ಸಂಚಾರಿ ಕುರಿಗಾಯಿ ನರೇಗಲ್ ಭಾಗದ ಜಮೀನೊಂದರಲ್ಲಿ ಕುರಿ ಮೇಯಿಸುವ ಸಂದರ್ಭದಲ್ಲಿ, ಹೊಲದಲ್ಲಿ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದೆ.
ಆದರೆ, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಸಂಚಾರ ನಿಷ್ಕ್ರಿಯವಾಗದ ಕಾರಣ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟ ಕುರಿಗಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿವೆ.

300 ಕುರಿಗಳ ಹಿಂಡನ್ನು ಮೂರು ಜನ ಸಂಚಾರಿ ಕುರಿಗಾಹಿಗಳು ಮೇಯಿಸುವ ಸಂದರ್ಭದಲ್ಲಿ ವಿದ್ಯುತ್ ಆಘಾತದಿಂದ ಸ್ಥಳದಲ್ಲಿಯೇ 11 ಕುರಿಗಳು ಹಾಗೂ ಒಂದು ನಾಯಿ ಸಾವನ್ನಪ್ಪಿದ್ದಾವೆ. ತಕ್ಷಣವೇ ಎಚ್ಚೆತ್ತುಗೊಂಡ ಸಂಚಾರಿ ಕುರಿಗಾಹಿಗಳಿಂದ ಹೆಚ್ಚಿನ ಕುರಿಗಳ ಸಾವು ತಪ್ಪಿದೆ. ಒಬ್ಬ ಕುರಿಗಾಯಿಗೆ ವಿದ್ಯುತ್ ಶಾಕ್ ಹೊಡೆದರೂ ಅದರಿಂದ ಸ್ವಲ್ಪದರಲ್ಲಿ ಸಾವಿನಿಂದ ಆತ ಬಚಾವ್ ಆಗಿದ್ದಾನೆ.
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಸರ್ಕಾರವು ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಾವನ್ನಪ್ಪಿದ ಕುರಿಗಳಿಗೆ ಪರಿಹಾರ ಒದಗಿಸಬೇಕೆಂದು ಕುರಿಗಾಯಿಗಳ ಆಗ್ರಹವಾಗಿದೆ.
Laxmi News 24×7