ಹುಬ್ಬಳ್ಳಿ, ಅಕ್ಟೋಬರ್ 01: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ರಾಜಕೀಯ ಬದುಕಿನಲ್ಲಿ ಬಿರುಗಾಳಿ ಏಳಲು ಕಾರಣವಾದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ. ಇದೀಗ 14 ನಿವೇಶನಗಳನ್ನು ಮರಳಿ ನೀಡಲು ನಿರ್ಧರಿಸಲಾಗಿದೆ.
ಇದರಿಂದ ಸೈಟ್ ವಾಪಾಸ್ ಕೊಟ್ಟು ಮತ್ತಷ್ಟು ಜಟೀಲ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ (ಮುಡಾ) ಇಲಾಖೆಯಿಂದ ಪಡೆದ 14 ಸೈಟು ಮೊದಲೇ ವಿಧಾನಸೌಧದಲ್ಲಿಯೇ ವಾಪಾಸ್ ಕೊಟ್ಟು ಹೈಕೋರ್ಟ್ ನೇತೃತ್ವದಲ್ಲಿ ತನಿಖೆ ಮಾಡಿಸಿದ್ದರೆ ಸಿಎಂ ಸಿದ್ದರಾಮಯ್ಯನವರ ಪ್ರಾಮಾಣಿಕತೆ ಪ್ರಶ್ನೆ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.
ಈಗ ಪ್ರಕರಣ ದಾಖಲಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟು ಹೈಕೋರ್ಟ್ ನಲ್ಲಿ ಎಫ್ ಐಆರ್ ಆಗಿ ಸಾಕಷ್ಟು ವಾದ ವಿವಾದಗಳು ಬಂದ ಮೇಲೆ ಇನ್ನಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅವುಗಳು ಮತ್ತಷ್ಟು ಜಠಿಲವಾಗಿವೆ. ಏನೇ ಆಗಲಿ ತನಿಖೆ ಮಾಡಲೇಬೇಕಾಗುತ್ತದೆ ಎಂದು, ಸೈಟ್ ವಾಪಾಸ್ ನೀಡಿದ್ದರಿಂದ ತನಿಖೆ ವಿನಾಯಿತಿ ಇಲ್ಲ ಎಂದು ಅವರು ಪರೋಕ್ಷವಾಗಿ ಗುಡುಗಿದರು.