ದಾಂಡೇಲಿ: ನಾಪತ್ತೆಯಾಗಿದ್ದ ಮಹಿಳೆಯೋರ್ವರ ಬಗ್ಗೆ ದೂರು ನೀಡಿದ ಕೇವಲ ಎರಡುವರೆ ಗಂಟೆಯೊಳಗಡೆ ಪೊಲೀಸರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ ಶ್ಲಾಘನಾರ್ಹ ಘಟನೆ ಅಂಬಿಕಾನಗರದ ಜಮಗಾದಲ್ಲಿ ನಡೆದಿದೆ.
ಅಂಬಿಕಾನಗರದ ಜಮಗಾ ನಿವಾಸಿ 50 ವರ್ಷ ವಯಸ್ಸಿನ ಫಾತಿಮಾ ಮುಂಡಗೋಡ ಇವರು ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಣಬೆ ತರಲೆಂದು ಕಾಡಿಗೆ ಹೋಗಿದ್ದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು.
ಈ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಸುತ್ತಮುತ್ತಲೂ ಹುಡುಕಿ, ಕೊನೆಗೆ ಸಂಜೆ 7.45 ನಿಮಿಷಕ್ಕೆ ಅಂಬಿಕಾನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ತಕ್ಷಣವೇ ಕಾರ್ಯ ಪ್ರವೃತ್ತರಾದ ಪಿಎಸ್‌ಐ ಹುಸೇನಸಾಬ ಕೆ.ಚಪ್ಪಾರಕರ ಅವರು ಮೊಬೈಲ್ ಲೊಕೇಶನ್ ತೆಗೆದು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಾರ್ವಜನಿಕರ ಸಹಕಾರದಲ್ಲಿ ಅಂಬಿಕಾನಗರದಿಂದ ಕುಳಗಿಯವರೆಗೆ ಕಾಡಿನಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಕುಳಗಿಯಲ್ಲಿ ರಸ್ತೆಯ ಹತ್ತಿರದ ಅರಣ್ಯ ಪ್ರದೇಶದಲ್ಲಿ ರಾತ್ರಿ 10:30 ಗಂಟೆ ಸುಮಾರಿಗೆ ಆಕೆಯನ್ನು ಪತ್ತೆ ಮಾಡಿ, ಅಂಬಿಕಾನಗರಕ್ಕೆ ಕರೆದೊಯ್ದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ಇಲಾಖೆಯ ಸಮಯೋಚಿತ ನಿರ್ಧಾರ, ಅರಣ್ಯ ಇಲಾಖೆಯ ಅಧಿಕಾರಿಗಳ ಸಿಬ್ಬಂದಿಗಳ ಸ್ಪಂದನೆ ಮತ್ತು ಸ್ಥಳೀಯರ ಸಹಕಾರದಿಂದ ಕೇವಲ ಎರಡುವರೆ ಗಂಟೆಯಲ್ಲಿ ಫಾತಿಮಾ ಮುಂಡಗೋಡ ಅವರನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಒಂದು ವೇಳೆ ಪತ್ತೆ ಹಚ್ಚದೆ ಇರುತ್ತಿದ್ದಲ್ಲಿ, ಫಾತಿಮಾ ಮುಂಡಗೋಡ ಅವರು ವನ್ಯಪ್ರಾಣಿಗಳ ದಾಳಿಗೆ ಸಿಲುಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ